ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ಪ್ರಾರಂಭ

ಉಡುಪಿ, ಸೆ.1: ಸುಮಾರು ಒಂದೂವರೆ ವರ್ಷದ ವಿರಾಮದ ಬಳಿಕ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ ಶುಕ್ರವಾರ ಮರಳುಗಾರಿಕೆ ಪ್ರಾರಂಭಗೊಂಡಿದೆ.
ಇಂದು ಪಡುತೋನ್ಸೆಯಲ್ಲಿ ಮರಳುಗಾರಿಕೆ ಪ್ರಾರಂಭಗೊಂಡಿದೆ. ಇಲ್ಲಿ ಅಕ್ಬರ್ ಎಂಬವರು ಜಿಲ್ಲಾಡಳಿತದಿಂದ ಮರಳುಗಾರಿಕೆ ನಡೆಸಲು ಪರವಾನಿಗೆ ಪಡೆದಿದ್ದು, ಇಂದಿನಿಂದ ಕೆಲಸ ಪ್ರಾರಂಭಿಸಿದ್ದಾರೆ. ಜಿಲ್ಲೆಯ ಇನ್ನೂ 6-7 ಕಡೆಗಳಲ್ಲಿ ಮರಳುಗಾರಿಕೆ ಪ್ರಾರಂಭಗೊಳ್ಳಲಿದ್ದು, ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮರಳುಗಾರಿಕೆ ಆರಂಭಗೊಳ್ಳಲಿದೆ ಎಂದು ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಯ ಹಿರಿಯ ವಿಜ್ಞಾನಿ ಕೋದಂಡರಾಮಯ್ಯ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಒಟ್ಟು 28 ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು, ಇವುಗಳ ತೆರವಿಗೆ ಒಟ್ಟು 134 ಪರವಾನಿಗೆಯನ್ನು ನೀಡಲು ಕರಾವಳಿ ನಿಯಂತ್ರಣ ವಲಯ ಸಮಿತಿ ಈಗಾಗಲೇ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಎರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ತಕ್ಷಣವೇ ಮರಳುಗಾರಿಕೆ ಪ್ರಾರಂಭಿಸುವಂತೆ ಧರಣಿ ನಡೆಸಿದ ಬಿಜೆಪಿ ನಾಯಕರಿಗೆ ತಿಳಿಸಿದ್ದರು.
ಮರಳುಗಾರಿಕೆಗೆ ಅರ್ಜಿ ಸಲ್ಲಿಸಿದ 168 ಮಂದಿಯಲ್ಲಿ 134 ಮಂದಿಗೆ ಈಗಾಗಲೇ ಮರಳುಗಾರಿಕೆ ನಡೆಸಲು ಪರವಾನಿಗೆ ನೀಡಲಾಗಿದೆ. ಉಳಿದ 34 ಮಂದಿಗೆ ವಿವಿಧ ಕಾರಣಕ್ಕಾಗಿ ಪರವಾನಿಗೆ ನೀಡದೆ ತಡೆ ಹಿಡಿಯಲಾಗಿದೆ. ಇವರಲ್ಲಿ ನಾಲ್ಕು ಮಂದಿಯ ವಿರುದ್ಧ ಕ್ರಿಮಿನಲ್ ಕೇಸ್ ಇರುವುದರಿಂದ ಅವರನ್ನು ಬಿಟ್ಟು ಉಳಿದ 30 ಮಂದಿಗೆ ಪರವಾನಿಗೆ ನೀಡುವ ಕುರಿತು ಸೆ. 2ರಂದು ನಡೆಯುವ ಮರಳು ಸಮಿತಿಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಡಿಸಿ ಭರವಸೆ ನೀಡಿದ್ದರು.
ಇಲ್ಲಿ ತೆಗೆಯಲಾಗುವ ಸಂಪೂರ್ಣ ಮರಳನ್ನು ಜಿಲ್ಲೆಯೊಳಗೆ ಬಳಸ ಬೇಕಾಗುತ್ತದೆ. ಹೊರ ಜಿಲ್ಲೆಗಳಿಗೆ ಈ ಮರಳನ್ನು ಸಾಗಿಸದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲೆಯ ಹೊರಗೆ ಮರಳು ಸಾಗಾಟ ತಡೆಯಲು ಪೊಲೀಸ್, ಅಬಕಾರಿ, ಅರಣ್ಯ ಇಲಾಖೆಗಳು, ಪಿಡಿಒ, ವಿಎ ಎಲ್ಲರಿಗೂ ಅಧಿಕಾರವನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಮರಳನ್ನು ಸಾಗಿಸಲು 407 ಹಾಗೂ ಟಿಪ್ಪರ್‌ಗಳಿಗೆ ಮಾತ್ರ ಅವಕಾಶವಿರುತ್ತದೆ. ದೊಡ್ಡಗಾತ್ರದ ಲಾರಿಗಳನ್ನು ಬಳಸುವುದಕ್ಕೆ ನಿಷೇಧ ವಿದಿಸಲಾಗುವುದು. ಮರಳು ಸಾಗಾಟದಿಂದ ಊರಿನ ರಸ್ತೆ ಹಾಳಾಗದಂತೆ ತಡೆಯಲು ಈ ಕ್ರಮ. ಒಂದು ಲೋಡ್‌ನಲ್ಲಿ ಗರಿಷ್ಠ ಎಂಟು ಟನ್ ಮರಳನ್ನು ಮಾತ್ರ ಸಾಗಿಸಲು ಅವಕಾಶ ನೀಡಲಾಗುವುದು ಎಂದೂ ಅವರು ತಿಳಿಸಿದ್ದರು.
ಒಟ್ಟು 134 ಪರವಾನಿಗೆಗಳಲ್ಲಿ ಉಡುಪಿ ತಾಲೂಕಿನಲ್ಲಿ 110 ಹಾಗೂ ಕುಂದಾಪುರ ತಾಲೂಕಿನಲ್ಲಿ 24 ಪರವಾನಿಗೆಗಳು ಲಭ್ಯವಿದೆ. ಇವುಗಳಲ್ಲಿ ಉಡುಪಿಯಲ್ಲಿ 26, ಬ್ರಹ್ಮಾವರದಲ್ಲಿ 84, ಕುಂದಾಪುರ 18 ಹಾಗೂ ಬೈಂದೂರು ವ್ಯಾಪ್ತಿಯಲ್ಲಿ 9 ಪರವಾನಿಗೆಗಳನ್ನು ನೀಡಲಾಗಿದೆ.
ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡುವವರಿಗೆ ಅದೇ ಗ್ರಾಪಂ ವ್ಯಾಪ್ತಿಯ ಪರವಾನಿಗೆ ಪಡೆಯಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮಾತ್ರ ಗ್ರಾಪಂ ಬಿಟ್ಟು ಹೊರಗೆ ಪರವಾನಿಗೆ ಪಡೆಯ ಬಹುದಾಗಿದೆ.







