ಭಟ್ಕಳ: ವಿವಿಧಡೆ ಈದುಲ್ ಅಝ್ ಹಾ ಆಚರಣೆ

ಭಟ್ಕಳ, ಸೆ.1: ಜಗತ್ತಿನ ಮನುಷ್ಯ ವರ್ಗದ ನಾಯಕರಾಗಿ ನೇಮಿಸಲಸ್ಪಟ್ಟ ಪ್ರವಾದಿ ಇಬ್ರಾಹೀಂರವರನ್ನುಅನುಸರಿಸುತ್ತ, ತಮ್ಮ ಜೀವನದಲ್ಲಿ ತ್ಯಾಗ ಮತ್ತು ಬಲಿದಾನಗಳಿಗೆ ಸಿದ್ಧರಾಗುವಂತೆ ಜಾಮಿಯಾ ಮಸೀದಿ ಚಿನ್ನದಪಳ್ಳಿಯ ಇಮಾಮ್ ಖತೀಬ್ ಮೌಲಾನ ಅಬ್ದುಲ್ ಅಲೀಮ್ ಕತೀಬ್ ನದ್ವಿ ಮುಸ್ಲಿಮ್ ಸಮುದಾಯಕ್ಕೆ ಕರೆ ನೀಡಿದರು.
ಅವರು ಶುಕ್ರವಾರ ನಡೆದ ಈದುಲ್ ಅಝ್ ಹಾ ಪ್ರಾರ್ಥನೆಯನ್ನು ಜಾಮಿಯಾ ಮಸೀದಿಯಲ್ಲಿ ನೆರವೇರಿಸಿ ಈದ್ ಸಂದೇಶ ನೀಡಿ ಮಾತನಾಡಿದರು.
ಕುರ್ಬಾನಿ (ಬಲಿದಾನ)ಎನ್ನುವುದು ಕೇವಲ ಪ್ರಾಣಿಬಲಿಯಾಗದೆ ಅದರ ಹಿಂದಿರುವ ಮಹಾನ್ ಉದ್ದೇಶವನ್ನು ಅರಿಯಬೇಕಾಗಿದೆ ಎಂದ ಅವರು, ವ್ಯಕ್ತಿಯ ಬಲಿದಾನವು ಒಂದು ಸಮುದಾಯ ಹಾಗೂ ಸಮಾಜವನ್ನು ಜೀವಂತವಾಗಿಡುತ್ತದೆ. ಕುರ್ಬಾನಿ ಎನ್ನುವುದು ಇಸ್ಲಾಮ್ ನ ಚಿನ್ನೆಗಳಲ್ಲೊಂದಾಗಿದ್ದು, ಅದು ನಮ್ಮ ಮೇಲೆ ಕಡ್ಡಾಯವಾಗಿದೆ. ಅಲ್ಲಾಹನ ಆದೇಶದ ಮೇರೆಗೆ ಪ್ರವಾದಿ ಇಬ್ರಾಹೀಮರು ತಮ್ಮ ಪ್ರೀತಿಯ ಪುತ್ರನನ್ನೇ ಬಲಿ ನೀಡಲು ಮುಂದಾದರು. ಇದು ಕೇವಲ ಸಂಕೇತ ಮಾತ್ರ. ಇಂದು ಮುಸ್ಲಿಮ್ ಸಮುದಾಯವು ಕೂಡ ಯಾವುದೇ ರೀತಿಯ ತ್ಯಾಗ ಬಲಿದಾನಗಳಿಗೆ ಸನ್ನದ್ಧರಾಗಿರಬೇಕೆಂಬುದು ಇದರ ಅಂತರಾಳವಾಗಿದೆ ಎಂದು ವಿವರಿಸಿದರು.
ವಿವಿಧಡೆ ಈದುಲ್ ಅಝ್ ಹಾ ಪ್ರಾರ್ಥನೆ: ಖಲಿಫಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಮಗ್ದೂಮ್ ಕಾಲೋನಿ ಜಾಮಿಯ ಮಸೀದಿಯಲ್ಲಿ ಮೌಲಾನ ನೇಮತುಲ್ಲಾ ಅಸ್ಕರಿ ನದ್ವಿ, ನವಯಾತ್ ಕಾಲೋನಿ ತಂಝೀಮ್ ಜಾಮಿಯಾ ಮಸೀದಿಯಲ್ಲಿ ಮೌಲಾನ ಮುಹಮ್ಮದ್ ಅನ್ಸಾರ್ ಖತೀಬ್ ನದ್ವಿ, ಮುಗಳೀಹೊಂಡ ಜಾಮಿಯಾ ಮಸೀದಿಯಲ್ಲಿ ಮೌಲಾನ ಮುನವ್ವರ್ ಪೇಶ್ಮಾಮ್ ನದ್ವಿ, ಮದೀನಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಝಕರಿಯಾ ಬರ್ಮಾವರ್ ನದ್ವಿ, ನೂರ್ ಜಾಮಿಯಾ ಮಸೀದಿಯಲ್ಲಿ ಮೌಲಾನ ತಾರಿಖ್ ಅಕ್ರಮಿ ನದ್ವಿ, ಗುಳ್ಮಿ ಜಾಮಿಯಾ ಮಸೀದಿಯಲ್ಲಿ ಮೌಲಾನ ಅಬ್ದುಲ್ ಆಹದ್ ಫರ್ಕದೆ ನದ್ವಿ, ಹಂಜಾ ಜಾಮಿಯಾ ಮಸೀದಿಯಲ್ಲಿ ಮೌಲಾನ ಇಕ್ಬಾಲ್ ನಾಯ್ತೆ ನದ್ವಿ, ಅಹ್ಮದ್ ಸಯೀದ್ ಹುರುಳಿ ಸಾಲ್ ಜಾಮಿಯಾ ಮಸೀದಿಯಲ್ಲಿ ಮೌಲಾನಜಾಫರ್ ಫಕ್ಕಿಭಾವ್ ನದ್ವಿ, ಇಮಾಮ್ ಬುಖಾರಿಜಾಮಿಯಾ ಮಸೀದಿಯಲ್ಲಿ ಶೇಖ್ ಫಝ್ಲುರ್ರಹ್ಮಾನ್ ಸಲಫಿ, ತೆಂಗಿನ ಗುಂಡಿ ಜಾಮಿಯಾ ಮಸೀದಿಯಲ್ಲಿ ಮೌಲಾನ ಇಸ್ಮಾಯೀಲ್ ಡಾಂಗಿ ನದ್ವಿ ಹಾಗೂ ಇಸ್ಮಾಯೀಲ್ ಜಾಮಿಯಾ ಮಸೀದಿ ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ಮೌಲಾನ ಮಹೆರಾಜ್ ಈದ್ ನಮಾಝ್ ನಿರ್ವಹಿಸಿ ಹಬ್ಬದ ಮಹತ್ವ, ಮುಸ್ಲಿಮ್ ಸಮುದಾಯದ ಹೊಣೆಗಾರಿಕೆ ಕುರಿತು ಪ್ರವಚನ ನೀಡಿ ದೇಶದ ಒಳಿತಿಗಾಗಿ ಪ್ರಾರ್ಥಿಸಿದರು.
ಹಬ್ಬದ ನಮಾಝ್ ನಂತರ ಮುಸ್ಲಿಮರು ಪರಸ್ಪರ ಈದ್ ಶುಭಾ ಕೋರಿ ಸಂಭ್ರಮಿಸಿದ್ದು, ಶುಕ್ರವಾರದಿಂದ ಮೂರು ದಿನಗಳ ಕಾಲ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು.







