ಲಕ್ಷ್ಮೀ ಹೆಬ್ಬಾಳ್‍ಕರ್ ವಿರುದ್ಧ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ದಾವಣಗೆರೆ, ಸೆ.1: ರಾಜ್ಯ ಕೆಪಿಸಿಸಿ ರಾಜ್ಯ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್‍ಕರ್‍ರವರು ಗಡಿನಾಡಿನ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರುದ್ಧ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಲಕ್ಷ್ಮೀ ಹೆಬ್ಬಾಳ್‍ಕರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮುಖೇನಾ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನಕಾರರು ಮಾತನಾಡಿ, ಬೆಳಗಾಂ ಬಸರೀಕಟ್ಟೆಯಲ್ಲಿ ಮರಾಠಿಗರು ಏರ್ಪಡಿಸಿದ್ದ ಕಾರ್ಯಕ್ರವೊಂದರಲ್ಲಿ ಮರಾಠಿಗರ ಓಲೈಕೆಗಾಗಿ ವಿವಾದಾತ್ಮಕ ಹೇಲಿಕೆ ನೀಡಿದ್ದು, ಲಕ್ಷ್ಮೀ ಹೆಬ್ಬಾಳ್‍ಕರೆ ಅವರು ಸುಪ್ರೀಂ ಕೋರ್ಟ್ ಆದೇಶ ಮಹಾರಾಷ್ಟ್ರ ಪರ ಬಂದರೆ ಮೊದಲ ಜೈ ಮಹಾರಾಷ್ಟ್ರ ಬಾವುಟ ಹಿಡಿದು ನಿಲ್ಲುತ್ತೇನೆ ಎಂದು ಬಾಲಿಷ ಮತ್ತು ವಿವಾದಾತ್ಮಕ ಹೇಳಿಕೆ ಸರಿಯಲ್ಲ ಎಂದು ಖಂಡಿಸಿದರು.
ಕಿತ್ತೂರು ನಾಡಿನಲ್ಲಿ ಹುಟ್ಟಿದ್ದು, ಕರ್ನಾಟಕ ನಾಡಿನ ಜನರಿಗಾಗಿ ಕೆಲಸ ಮಾಡುತ್ತೇನೆಂದು ಹೇಳುತ್ತಿರುವ ಕೆಪಿಸಿಸಿ ರಾಜ್ಯ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್‍ಕರ್ ಅವರ ನಡೆ ಕರ್ನಾಟಕ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ಭಾವನೆ ಕೆರಳಿಸುವಂತಹ ಹೇಳಿಕೆ ನೀಡುತ್ತಿದ್ದು, ಇದು ರಾಜ್ಯದ ಕನ್ನಡಿಗರಿಗೆ ಅವಮಾನ ಮಾಡಿದಂತಾಗಿದೆ ಎಂದು ಆರೋಪಿಸಿದರು.
ಈ ಕೂಡಲೇ ರಾಜ್ಯ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಲಕ್ಷ್ಮೀ ಹೆಬ್ಬಾಳ್‍ಕರ್ ಅವರನ್ನು ಮಹಿಳಾ ಅಧ್ಯಕ್ಷೆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಪಿ.ಸುಂಕಾಪುರ, ಹೊನ್ನಾಳಿ ತಾಲೂಕು ಅಧ್ಯಕ್ಷ ಎಸ್.ಎಸ್.ಶ್ರೀನಿವಾಸ್, ಮಹಿಳಾ ಜಿಲ್ಲಾಧ್ಯಕ್ಷೆ ಉಮಾ ತೋಟಪ್ಪ, ಜೆ.ಸಿ.ವಸುಂದರ, ಆದಾಪುರ ನಾಗರಾಜ್, ಎಂ.ಎ.ಸಾದಿಕ್, ಶಿವಕುಮಾರ್ ಶೆಟ್ಟಿ, ಮನ್ಸೂರ್, ಮುತ್ತು, ಕರಾಟೆ ರಾಮು, ಎನ್.ಪರಶುರಾಮ್, ಚಂದ್ರಶೇಖರ್, ಅಫ್ಜಲ್, ನೂರುಲ್ಲಾ ಬಾಷಾ ಮತ್ತಿತರರು ಇದ್ದರು.







