ಸರಕಾರಿ ಶಾಲೆಗಳಿಗೆ ಶಕ್ತಿ ತುಂಬಲು ಕಂಪೆನಿಗಳು ಕೈಜೋಡಿಸಬೇಕು: ಉಷಾಶೆಟ್ಟಿ

ಶಿಡ್ಲಘಟ್ಟ, ಸೆ.1: ಸರ್ಕಾರಿ ಶಾಲೆಗಳಿಗೆ ಹೊಸ ರೂಪ ಮತ್ತು ಶಕ್ತಿ ತುಂಬುವ ನಿಟ್ಟಿನಲ್ಲಿ ನಗರದ ಕಂಪೆನಿಗಳ ಉದ್ಯೋಗಿಗಳನ್ನು ಗ್ರಾಮಗಳಿಗೆ ಕರೆತಂದು ಸರ್ಕಾರಿ ಶಾಲೆಯೊಂದಿಗೆ ಕೈ ಜೋಡಿಸಬೇಕು. ಇಂತಹ ಕೆಲಸವನ್ನು ಗ್ರಾಮಾಂತರ ಟ್ರಸ್ಟ್ ಮೂಲಕ ಮಾಡುತ್ತಿದ್ದೇವೆ ಎಂದು ಸ್ವಯಂಸೇವಕಿ ಉಷಾಶೆಟ್ಟಿ ತಿಳಿಸಿದರು.
ತಾಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಿಟ್ರಿಕ್ಸ್ ಆರ್ ಆ್ಯಂಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಉದ್ಯೋಗಿಗಳಿಂದ ವರ್ಲಿ ಚಿತ್ರಗಳನ್ನು ರಚಿಸುವ ಕೆಲಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ ಮಳ್ಳೂರು ಮತ್ತು ಮುತ್ತೂರು ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಕೋಣೆ, ಶಾಲೆಯ ಗೋಡೆ ಹಾಗೂ ಕಾಂಪೋಂಡ್ ಗೋಡೆಗಳಿಗೆ ವರ್ಲಿ ಚಿತ್ರಗಳನ್ನು ಸಿಟ್ರಿಕ್ಸ್ ಆರ್ ಆ್ಯಂಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಉದ್ಯೋಗಿಗಳು ರಚಿಸುತ್ತಿದ್ದಾರೆ. ಕಂಪೆನಿಯ 50 ಮಂದಿ ಸ್ವಯಂ ಸೇವಕರು ಆಗಮಿಸಿದ್ದು ಅವರಲ್ಲಿ ಎರಡು ತಂಡಗಳು ಎರಡು ಶಾಲೆಗಳಲ್ಲಿ ಚಿತ್ರ ರಚಿಸುತ್ತಿದ್ದಾರೆ. ಮೂರನೇ ತಂಡದ ಎಂಟು ಮಂದಿ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯ ಹಾಗೂ ಮುಂದಿನ ಭವಿಷ್ಯದ ವಿದ್ಯೆಯ ಅವಕಾಶಗಳ ಕುರಿತಂತೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಹೇಳಿದರು.
ಚಿತ್ರ ರಚನೆಗೆ ಅಗತ್ಯವಿರುವ ಪೇಂಟ್, ಬ್ರಷ್ ಮುಂತಾದವುಗಳನ್ನು ಕಂಪೆನಿಯೇ ಭರಿಸಿದೆ. ಅವರಿಗೆ ಮಾರ್ಗದರ್ಶಕರಾಗಿ ಸ್ಥಳೀಯ ಗಿಡ್ನಹಳ್ಳಿ ಮತ್ತು ಹಳೇಪೆರೇಸಂದ್ರ ಸರ್ಕಾರಿ ಶಾಲೆಗಳ ಕಲಾ ಶಿಕ್ಷಕರಾದ ಎಂ.ನಾಗರಾಜ್ ಮತ್ತು ಅರುಣ್ ಇದ್ದಾರೆ. ಬೆಂಗಳೂರಿನಿಂದ ಕಲಾವಿದೆ ಮೀರಾ ಅರುಣ್ ಸಹ ಜೊತೆಗೂಡಿದ್ದಾರೆ. ಒಟ್ಟಾರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯನ್ನು ಚಂದಗೊಳಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದಾವುದ್ ಪಾಷ ಮಾತನಾಡಿ, ಈ ಹಿಂದೆಯೂ ನಮ್ಮ ಶಾಲೆಗೆ ಸಿಟ್ರಿಕ್ಸ್ ಕಂಪೆನಿಯವರು ಅಡುಗೆಗೆ ಸಂಬಂಧಿಸಿದ ಪರಿಕರಗಳು, ಮಕ್ಕಳಿಗೆ ಉಪಯುಕ್ತ ವಸ್ತುಗಳನ್ನು ನೀಡಿದ್ದರು. ಈ ದಿನ ವರ್ಲಿ ಕಲೆಯಿಂದ ನಮ್ಮ ಶಾಲೆಯ ಗೋಡೆಗಳನ್ನು ಅಲಂಕರಿಸುತ್ತಿದ್ದಾರೆ. ಗಣಿತದ ಆಕೃತಿಗಳಾದ ತ್ರಿಭುಜ, ವೃತ್ತ, ಷಟ್ಭುಜ, ಚೌಕಗಳನ್ನು ಬಳಸಿ ರಚಿಸುವ ವರ್ಲಿ ಕಲೆಯ ಮೂಲಕ ಸಾಮಾಜಿಕ ಸಂದೇಶ, ಪರಿಸರ ಕಾಳಜಿ, ಗ್ರಾಮ ನೈರ್ವಲ್ಯ, ಜಾನಪದ ಸೊಗಡನ್ನು ಪ್ರದರ್ಶಿಸುತ್ತಿರುವುದು ಮಕ್ಕಳಿಗೆ ಹಾಗೂ ಶಾಲೆಗೆ ಬರುವವರಿಗೆಲ್ಲ ಅನುಕೂಲಕರ ಎಂದು ನುಡಿದರು.
ಗ್ರಾಮದ ಮುಖಂಡ ಕೆಂಪೇಗೌಡ, ಕಲಾ ಶಿಕ್ಷಕರಾದ ಎಂ.ನಾಗರಾಜ್ ಮತ್ತು ಅರುಣ್, ಸಿಟ್ರಿಕ್ಸ್ ಕಂಪೆನಿಯ ಆಯುಷ್ ಅಗರ್ ವಾಲ್, ಅಭಿಜಿತ್ ಸತ್ಯನಾರಾಯಣ ಹಾಜರಿದ್ದರು.







