ಖಾಲಿಹೊಟ್ಟೆಯಲ್ಲಿ ಇವುಗಳನ್ನು ಮಾಡಲೇಬಾರದು,ಗೊತ್ತಾ?
ನಾವು ಏನನ್ನು ತಿನ್ನುತ್ತೇವೆಯೋ ಅದೇ ನಮ್ಮ ಜೀವಂತಿಕೆಯಾಗಿದೆ. ಆದರೆ ಊಟಕ್ಕೆ ಮೊದಲು ಮತ್ತು ಊಟ ಮಾಡುವಾಗ ನಾವು ಏನನ್ನು ಮಾಡಬೇಕು ಎನ್ನುವುದು ಮುಖ್ಯವಾಗಿದೆ. ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆ ಎದ್ದ ಬಳಿಕ ಮಾಮೂಲು ದಿನಚರಿಯನ್ನೇ ಅನುಸರಿಸುತ್ತೇವೆ. ಅದು ಕಾಫಿ ಸೇವನೆಯಾಗಿರಲಿ, ಬೆಳಗಿನ ವಾಯುವಿಹಾರ ಅಥವಾ ಕಚೇರಿಗೆ ತೆರಳುವ ಧಾವಂತವಾಗಿರಲಿ....ಖಾಲಿಹೊಟ್ಟೆಯಲ್ಲಿ ಮಾಡಬಾರದ ಕೆಲವು ವಿಷಯಗಳಿವೆ. ಬೆಳಿಗ್ಗೆ ಮನೆಯಿಂದ ಹೊರಗೆ ತೆರಳುವ ಮುನ್ನ ನೀವು ಸ್ವಂತಕ್ಕೆ ಕೆಲ ಹೆಚ್ಚುವರಿ ಸಮಯವನ್ನು ನೀಡಬೇಕು. ನೀವು ಬೆಳಿಗ್ಗೆ ಎದ್ದೊಡನೆ ಖಾಲಿಹೊಟ್ಟೆಯಲ್ಲಿ ಈ ಕೆಲಸಗಳನ್ನು ಮಾಡುವುದರಿಂದ ದೂರ ಉಳಿಯುವುದು ಒಳ್ಳೆಯದು.
ಉರಿಯೂತ ನಿರೋಧಕ ಔಷಧಿ ಸೇವನೆ:
ಖಾಲಿಹೊಟ್ಟೆಯಲ್ಲಿ ಉರಿಯೂತ ನಿರೋಧಕ ಔಷಧಿಗಳನ್ನೆಂದಿಗೂ ಸೇವಿಸಬಾರದು. ಹಾಗೆ ಮಾಡಿದರೆ ಅದು ಜಠರದಲ್ಲಿ ರಕ್ತಸ್ರಾವದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಮತ್ತು ಔಷಧಿಯ ನಿರೀಕ್ಷಿತ ಪರಿಣಾಮವನ್ನೂ ಕಡಿಮೆ ಮಾಡುತ್ತದೆ.
ಕಾಫಿ ಸೇವನೆ:
ಖಾಲಿಹೊಟ್ಟೆಯಲ್ಲಿ ಕಾಫಿಯನ್ನು ಸೇವಿಸುವುದರಿಂದ ಅದು ಎದೆಯುರಿ ಮತ್ತು ಇತರ ಜೀರ್ಣಾಂಗ ಸಮಸ್ಯೆಗಳಿಗೆ ಕಾರಣವಾಗುವ ಆಮ್ಲ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಹೀಗಾಗಿ ಖಾಲಿಹೊಟ್ಟೆಯಲ್ಲಿ ಕಾಫಿ ಸೇವನೆಯಿಂದ ದೂರ ಉಳಿಯುವುದು ಒಳ್ಳೆಯದು.
ಮದ್ಯಪಾನ:
ಖಾಲಿಹೊಟ್ಟೆಯಲ್ಲಿ ಮದ್ಯ ಸೇವನೆ ಮಾಡಿದರೆ ಅದನ್ನು ಹೀರಿಕೊಳ್ಳುವ ಪ್ರಮಾಣ ಶೇ.2ರಷ್ಟು ಹೆಚ್ಚುತ್ತದೆ ಮತ್ತು ಮದ್ಯಸಾರ ವಿಭಜನೆ ನಿಧಾನಗೊಳ್ಳುತ್ತದೆ. ಇದು ಗಂಭೀರ ಹ್ಯಾಂಗೋವರ್ಗೆ ಕಾರಣವಾಗುತ್ತದೆ. ಹೀಗಾಗಿ ಖಾಲಿಹೊಟ್ಟೆಯಲ್ಲೆಂದೂ ಮದ್ಯವನ್ನು ಸೇವಿಸಬಾರದು.
ಚ್ಯೂಯಿಂಗ್ ಗಮ್:
ಚ್ಯೂಯಿಂಗ್ ಗಮ್ ಅಗಿಯುವುದರಿಂದ ಉತ್ಪತ್ತಿಯಾಗುವ ಪಚನಕಾರಿ ಆಮ್ಲವು ಖಾಲಿಹೊಟ್ಟೆಯ ಒಳಪದರಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಜಠರದುರಿತಕ್ಕೆ ಕಾರಣವಾಗುತ್ತದೆ.
ನಿದ್ರೆ ಮಾಡುವಿಕೆ:
ಖಾಲಿಹೊಟ್ಟೆಯಲ್ಲಿ ಮಲಗಿದರೆ ಹಸಿವು ಮತ್ತು ಕಡಿಮೆ ಗ್ಲುಕೋಸ್ ಮಟ್ಟದಿಂದಾಗಿ ಒಳ್ಳೆಯ ನಿದ್ರೆಯಿಂದ ವಂಚಿತರಾಗಬೇಕಾಗುತ್ತದೆ. ಅಲ್ಲದೆ ನಿದ್ರೆಯ ಕೊರತೆಯು ಹಸಿವನ್ನುಂಟು ಮಾಡುವ ಹಾರ್ಮೋನ್ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.