ಒಎಂಕೆ ಅರ್ಧಶತಕ
ಒಂದು ಮೊಟ್ಟೆಯ ಕಥೆ

ಸರಳ ಹಾಗೂ ಲವಲವಿಕೆಯ ಕಥಾನಿರೂಪಣೆ ಯೊಂದಿಗೆ ಪ್ರೇಕ್ಷಕರ ಮನಸೂರೆ ಗೊಂಡ ‘ಒಂದು ಮೊಟ್ಟೆಯ ಕಥೆ’ (ಓಎಂಕೆ) ಚಿತ್ರದ ಗೆಲುವಿನ ಸವಾರಿ ಮುಂದುವರಿದಿದೆ. ಹೌದು. ಹೊಸಬರೇ ತುಂಬಿರುವ ಈ ಚಿತ್ರ ಈಗಾಗಲೇ ರಾಜ್ಯದೆಲ್ಲೆಡೆ 50 ದಿನಗಳ ಪ್ರದರ್ಶನವನ್ನು ಕಂಡಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿಯೂ ಹಿಟ್ ಚಿತ್ರ ಕೊಡಲು ಸಾಧ್ಯವಿದೆಯೆಂಬುದನ್ನು ಓಎಂಕೆ ತಂಡ ಸಾಧಿಸಿ ತೋರಿಸಿದೆ. ಜುಲೈ 7ರಂದು ಬಿಡುಗಡೆಯಾದ ಈ ಚಿತ್ರವು ಈಗಾಗಲೇ ಆಗಸ್ಟ್ 25ಕ್ಕೆ 50 ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿದೆ. ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನೂ ಸೆಳೆದಿರುವ ಈ ಚಿತ್ರ ಅಮೆರಿಕದಲ್ಲೂ ಮೋಡಿ ಮಾಡಿದೆ. ಹೊಸತಲೆಮಾರಿನ ಹಾಗೂ ಪ್ರಯೋಗಶೀಲ ನಿರ್ದೇಶಕರಿಗೂ ಒಂದು ಮೊಟ್ಟೆಯ ಕತೆಯ ಯಶಸ್ಸು ಸ್ಪೂರ್ತಿ ತುಂಬಿದೆ. ಲೂಸಿಯಾನ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ರಾಜ್ ಬಿ. ಶೆಟ್ಟಿ ನಿರ್ದೇಶಿಸಿದ್ದಾರೆ.
ಅಂದಹಾಗೆ, ಒಂದು ಮೊಟ್ಟೆಯ ಕಥೆ, ಬಿಡುಗಡೆಗೂ ಮುನ್ನ ಲಂಡನ್ ಹಾಗೂ ನ್ಯೂಯಾರ್ಕ್ ಚಿತ್ರೋತ್ಸವಗಳಲ್ಲಿ ತೆರೆಕಂಡು,ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತ್ತು. ಒಟ್ಟಿನಲ್ಲಿ ಒಂದು ಮೊಟ್ಟೆಯ ಕಥೆ, ಕನ್ನಡ ಚಿತ್ರರಂಗದಲ್ಲಿ ಹೊಸತನಕ್ಕೆ ಕಾವುಕೊಟ್ಟಿದೆ.





