ಸೆ.7ರ ಬಿಜೆಪಿ ಯುವ ಮೋರ್ಚಾ ರ್ಯಾಲಿ ನಿಷೇಧಿಸಲು ಎಸ್‌ಡಿಪಿಐ ಆಗ್ರಹ
ಸಂಸದ ಪ್ರತಾಪ ಸಿಂಹ ವಿರುದ್ಧ ಕ್ರಮಕ್ಕೆ ಒತ್ತಾಯ

ಮಂಗಳೂರು, ಸೆ.2: ಬಿಜೆಪಿ ಯುವ ಮೋರ್ಚಾ ಸೆ. 7ರಂದು ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ರ್ಯಾಲಿಯನ್ನು ನಿಷೇಧಿಸಬೇಕು ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.
ಪಕ್ಷದ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಶನಿವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಗಾಗಲೆ ಕಲ್ಲಡ್ಕ ಪ್ರಕರಣದ ನಂತರ ಜಿಲ್ಲೆಯ ವಿವಿಧೆಡೆ 50ಕ್ಕೂ ಅಧಿಕ ದಿನಗಳ ಕಾಲ ನಿಷೇಧಾಜ್ಞೆ ಜಾರಿ, ಅಹಿತಕರ ಘಟನೆಯಿಂದ ಜನತೆ ತತ್ತರಿಸಿದ್ದಾರೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈರನ್ನು ಸಂಪುಟದಿಂದ ಕೈ ಬಿಡಬೇಕು ಮತ್ತು ಎಸ್‌ಡಿಪಿಐ ಪಕ್ಷ ಹಾಗು ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮಂಗಳೂರಿನಲ್ಲಿ ರ್ಯಾಲಿ ನಡೆಸುವುದರಲ್ಲಿ ಅರ್ಥವಿಲ್ಲ. ಸಚಿವರ ರಾಜೀನಾಮೆ ಕೇಳಲು ವಿಧಾನ ಸೌಧದ ಮುಂದೆ ಪ್ರತಿಭಟನೆ ಮಾಡಬಹುದಿತ್ತು.
ಪಿಎಫ್‌ಐ ರಾಷ್ಟ್ರೀಯ ಸಂಘಟನೆಯಾಗಿದೆ. ಎಸ್‌ಡಿಪಿಐ ರಾಷ್ಟ್ರಮಟ್ಟದ ಪಕ್ಷವಾಗಿದೆ. ಈ ಪಕ್ಷ ಮತ್ತು ಸಂಘಟನೆಯನ್ನು ನಿಷೇಧಿಸಲು ಆಗ್ರಹಿಸಿ ಕೇಂದ್ರದ ಮೂಲಕ ಒತ್ತಡ ಹಾಕಬಹುದಿತ್ತು. ಆದರೆ ಇದೆಲ್ಲಾ ನೆಪಮಾತ್ರ. ರಾಜಕೀಯ ಲಾಭಕ್ಕೋಸ್ಕರ ಮಂಗಳೂರಿನಲ್ಲಿ ರ್ಯಾಲಿ ನಡೆಸಿ ಮತ್ತೆ ಜನತೆಯಲ್ಲಿ ಭಯಭೀತಿ ಹುಟ್ಟಿಸಲು ಬಿಜೆಪಿ ಮುಂದಾಗಿದೆ. ಇದಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಬಾರದು ಎಂದರು.
ಜಿಲ್ಲೆಯಲ್ಲಿ ನಡೆಯುವ ಬೈಕ್ ರ್ಯಾಲಿಗೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಚಿಕ್ಕಮಗಳೂರಿನ ಜನರು ಮಂಗಳೂರಿಗೆ ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣವಿದ್ದು, ಈ ರ್ಯಾಲಿಯ ಮೂಲಕ ಮತ್ತೆ ಅಶಾಂತಿ ಸೃಷ್ಟಿಯಾಗುವ ಅಪಾಯವಿದೆ. ಹಾಗಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ರ್ಯಾಲಿಯನ್ನು ನಿಷೇಧಿಸಬೇಕು ಎಂದು ಹನೀಫ್ ಖಾನ್ ಕೊಡಾಜೆ ಒತ್ತಾಯಿಸಿದರು.
ನೈತಿಕತೆ ಇಲ್ಲ: ಕರಾವಳಿಯಲ್ಲಿ ಬಿಜೆಪಿ ಮತ್ತು ಸಂಘಪರಿವಾರವು 23 ಮುಸಲ್ಮಾನರನ್ನು ಮಾತ್ರವಲ್ಲ, 13 ಅಮಾಯಕ ಹಿಂದೂಗಳನ್ನು ಕೂಡ ಹತ್ಯೆ ಮಾಡಿದೆ. ಹಾಗಾಗಿ ಬಿಜೆಪಿ, ಸಂಘಪರಿವಾರಕ್ಕೆ ಬೈಕ್ ರ್ಯಾಲಿ ಅಥವಾ ಮಂಗಳೂರು ಚಲೋ ನಡೆಸಲು ನೈತಿಕ ಹಕ್ಕಿಲ್ಲ. ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಮತ್ತು ಸಂಸದ ಪ್ರತಾಪ ಸಿಂಹ ಸುಳ್ಳು ಹೇಳಿಕೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆ ತಕ್ಷಣ ಅವರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಹನೀಫ್ ಖಾನ್ ಕೊಡಾಜೆ ಆಗ್ರಹಿಸಿದರು.
ಸೌಹಾರ್ದ ನಡಿಗೆ ಕೂಡ ರಾಜಕೀಯ ಗಿಮಿಕ್:ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಜಿಲ್ಲೆಯಲ್ಲಿ ನಡೆಸುವ ‘ಶಾಂತಿಗಾಗಿ -ಸೌಹಾರ್ದ ನಡಿಗೆ’ ಕೂಡ ಒಂದು ರಾಜಕೀಯ ಗಿಮಿಕ್. ಅವರು ಶಾಂತಿಯನ್ನೇ ಬಯಸುವುದಾದರೆ ಎಲ್ಲ ರಾಜಕೀಯ ಪಕ್ಷ, ಸಂಘಟನೆಯನ್ನೂ ಆಹ್ವಾನಿಸಲಿ. ಅದು ಬಿಟ್ಟು ನಡೆಸುವ ನಡಿಗೆಯು ಚುನಾವಣಾ ರಾಜಕೀಯ ಕಾರ್ಯಕ್ರಮವಾಗಿದೆ ಎಂದು ಹನೀಫ್ ಖಾನ್ ಕೊಡಾಜೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ. ಅಥಾವುಲ್ಲಾ, ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಕೋಶಾಧಿಕಾರಿ ಇಕ್ಬಾಲ್ ಗೂಡಿನಬಳಿ, ಸದಸ್ಯ ಶಾಹುಲ್ ಹಮೀದ್ ಉಪಸ್ಥಿತರಿದ್ದರು.







