ಶಿವಮೊಗ್ಗದಲ್ಲಿ ಸಂಭ್ರಮ, ಸಡಗರದ ಬಕ್ರೀದ್ ಆಚರಣೆ

ಶಿವಮೊಗ್ಗ, ಸೆ. 2: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಸಂಭ್ರಮ, ಸಡಗರದಿಂದ ಮುಸ್ಲಿಮರು ಆಚರಣೆ ಮಾಡಿದರು.
ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯ ಮಸೀದಿಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸವಳಂಗ ರಸ್ತೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಜೊತೆಗೂಡಿ ಪ್ರಾರ್ಥನೆ ಸಲ್ಲಿಸಿದರು.
ನಗರದ ಗೋಪಾಳ, ಸೋಮಿನಕೊಪ್ಪ, ಊರುಗಡೂರು ಸೇರಿದಂತೆ ಇತರೆಡೆಯೂ ಈದ್ಗಾ ಮೈದಾನಗಳಲ್ಲಿ ಸ್ಥಳೀಯ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಮಾಡಿದರು. ತದನಂತರ ಮುಸ್ಲಿಂ ಧರ್ಮ ಗುರುಗಳು ಹಬ್ಬದ ಸಂದೇಶ ನೀಡಿದರು.
ವಿವಿಧ ಸಮುದಾಯಗಳ ಮುಖಂಡರು ಕೂಡ ಪ್ರಾರ್ಥನೆಯಲ್ಲಿ ಭಾಗವಹಿಸಿ ಸರ್ವಧರ್ಮ ಸಮನ್ವಯತೆ ಮೆರೆದರು. ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.
ಸಾಮೂಹಿಕ ಪ್ರಾರ್ಥನೆಗಳಲ್ಲಿ ಆಕರ್ಷಕ ವೇಷಭೂಷಣ ತೊಟ್ಟಿದ್ದ ಪುಟಾಣಿಗಳು ಎಲ್ಲರ ಗಮನ ಸೆಳೆದರು. ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಧರ್ಮಿಯರು ತಮ್ಮ ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಧು-ಬಳಗ, ಸ್ನೇಹಿತರ ಜೊತೆಗೂಡಿ ಸವಿದರು.
ಬಿಗಿ ಪಹರೆ: ಹಬ್ಬದ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈದ್ಗಾ ಮೈದಾನಗಳ ಸುತ್ತಮುತ್ತ ಭದ್ರತೆ ಬಿಗಿಗೊಳಿಸಲಾಗಿತ್ತು. ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿತ್ತು. ಸಾಮೂಹಿಕ ಪ್ರಾರ್ಥನೆ ನಡೆದ ಈದ್ಗಾ ಮೈದಾನಕ್ಕೆ ಸಂಪರ್ಕ ರಸ್ತೆಗಳಲ್ಲಿ ಕೆಲ ಸಮಯದವರೆಗೆ ವಾಹನ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿತ್ತು.







