ಬಿಜೆಪಿ ಯುವಮೋರ್ಚಾದ ಬೈಕ್ ರ‍್ಯಾಲಿ ಕೈಬಿಡಲು ಸಚಿವ ಖಾದರ್ ಒತ್ತಾಯ

ಮಂಗಳೂರು, ಸೆ.2: ಪ್ರಸಕ್ತ ಪರಿಸ್ಥಿತಿಯಲ್ಲಿ ದ.ಕ. ಜಿಲ್ಲೆಯಲ್ಲಿ ವಿವಿಧ ಜಿಲ್ಲೆಗಳಿಂದ ಬೈಕ್ ರ‍್ಯಾಲಿ ನಡೆಸುವುದರಿಂದ ಸೌಹಾರ್ದತೆಗೆ ಧಕ್ಕೆಯಾಗುವ ಅಪಾಯವಿದೆ. ಆ ಕಾರಣಕ್ಕಾಗಿ ಬಿಜೆಪಿ ಯುವ ಮೋರ್ಚಾ ನಡೆಸಲುದ್ದೇಶಿಸಿರುವ ಬೈಕ್ ರ‍್ಯಾಲಿಯನ್ನು ಕೈಬಿಡಬೇಕು ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನತೆಯ ಪರವಾಗಿ ತಾನು ಈ ಮನವಿಯನ್ನು ಮಾಡುತ್ತಿದ್ದು, ಜಿಲ್ಲೆಯಲ್ಲಿ ಶಾಂತಿ, ಸಹೋದರತೆ, ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ರ‍್ಯಾಲಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ರ‍್ಯಾಲಿ, ಪ್ರತಿಭಟನೆ ಮಾಡಲು ಅವಕಾಶವಿದೆ. ಜಿಲ್ಲೆಯಲ್ಲಿ ಕೆಲಸಮಯದ ಹಿಂದೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪ್ರಸಕ್ತ ಪರಿಸ್ಥಿತಿಯಲ್ಲಿ ವಿವಿಧ ಜಿಲ್ಲೆಗಳಿಂದ ದ.ಕ. ಜಿಲ್ಲೆಗೆ ಬೈಕ್ ರ‍್ಯಾಲಿ ಆಗಮಿಸುವ ವೇಳೆ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದೆ. ದುರ್ಘಟನೆಗಳು ನಡೆದ ಬಳಿಕ ಒಬ್ಬರಿಗೊಬ್ಬರು ದೂಷಣೆ ಮಾಡುವ ಪ್ರಸಂಗವೂ ಎದುರಾಗಬಹುದು. ಏಕಕಾಲದಲ್ಲಿ ವಿಭಿನ್ನ ಕಡೆಗಳಿಂದ ರ‍್ಯಾಲಿ ಜಿಲ್ಲೆಗೆ ಆಗಮಿಸುವುದನ್ನು ಪೊಲೀಸ್ ಇಲಾಖೆಗೆ ನಿಗಾ ಇರಿಸುವುದು ಕಷ್ಟ ಸಾಧ್ಯವಾಗಬಹುದು. ತಾಲೂಕು, ಜಿಲ್ಲಾ ಮಟ್ಟದಲ್ಲಿ ಇಂತಹ ರ‍್ಯಾಲಿ ನಡೆಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಬೇರೆ ಬೇರೆ ಜಿಲ್ಲೆಗಳಿಂದ ಬೈಕ್ ರ‍್ಯಾಲಿ ಜಿಲ್ಲೆಗೆ ಆಗಮಿಸುವುದಕ್ಕೆ ಮಾತ್ರವೇ ತಾವು ಆಕ್ಷೇಪಿಸುವುದಾಗಿ ಸಚಿವ ಖಾದರ್ ಹೇಳಿದರು.
ಸೌಹಾರ್ದತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯೂ ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ಮುಂದೆ ಏನಾದರೂ ಅನಾಹುತವಾದಲ್ಲಿ ಅದಕ್ಕೆ ಇಲಾಖೆಯೇ ಹೊಣೆಯಾಗಲಿದೆ ಎಂದು ಖಾದರ್ ನುಡಿದರು.
ಗೃಹ ಖಾತೆಗೆ ರಾಮಲಿಂಗಾ ರೆಡ್ಡಿ ಕೂಡಾ ಸಮರ್ಪಕ ಆಯ್ಕೆ
ಗೃಹ ಖಾತೆಗೆ ಸಂಬಂಧಿಸಿ ಮುಖ್ಯಮಂತ್ರಿಯವರು ನಾಲ್ಕು ಮಂದಿ ಹಿರಿಯ ಹಾಗೂ ಉತ್ತಮ ಸಚಿವರ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು. ಅವರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥರೈ ಕೂಡಾ ಒಬ್ಬರು. ಹಾಗಾಗಿ ಅವರು ಆಗಬೇಕೆಂಬ ಆಸೆ ನಮಗೂ ಇತ್ತು. ಇದೀಗ ಮುಖ್ಯಮಂತ್ರಿ ಆಯ್ಕೆ ಮಾಡಿರುವ ರಾಮಲಿಂಗಾ ರೆಡ್ಡಿಯವರು ಕೂಡಾ ಸಮರ್ಪಕ ಆಯ್ಕೆ ಎಂದು ಸುದ್ದಿಗಾರರ ಪ್ರಶ್ನೆಯೊಂದ್ಕೆ ಸಚಿವ ಖಾದರ್ ಪ್ರತಿಕ್ರಿಯಿಸಿದರು.
ಸಚಿವ ರೈಯವರು ಗೃಹ ಖಾತೆಗೆ ಯೋಗ್ಯರಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗರೊಬ್ಬರು ಹೇಳಿಕೆ ನೀಡಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ನೈಜ ಕಾಂಗ್ರೆಸ್ಸಿಗರಾರೂ ರೈ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದರು.
ಹಾಗಾದರೆ ಹಿರಿಯ ನಾಯಕ ವಿಜಯ ಕುಮಾರ್ ಶೆಟ್ಟಿಯವರು ನೈಜ ಕಾಂಗ್ರೆಸ್ಸಿಗರಲ್ಲವೇ ಎಂದು ಸುದ್ದಿಗಾರರ ಪ್ರಶ್ನೆಗೆ, ಹಿರಿಯ ಕಾಂಗ್ರೆಸ್ ನಾಯಕ ವಿಜಯ ಕುಮಾರ್ ಶೆಟ್ಟಿಯವರು ಸಚಿವ ರೈ ವಿರುದ್ಧ ಹೇಳಿಕೆ ನೀಡಿರುವ ಬಗ್ಗೆ ನನಗೆ ತಿಳಿದಿಲ್ಲ. ಎರಡು ದಿನಗಳ ಹಿಂದೆ ಅವರು ನನ್ನ ಜತೆಗಿದ್ದರೂ ಈ ವಿಷಯದ ಬಗ್ಗೆ ಮಾತನಾಡಿಲ್ಲ ಎಂದರು.







