ಪ್ರಕೃತಿಯ ನಿಯಂತ್ರಣ ಅಸಾಧ್ಯ,ಆದರೆ ವರ್ಷಗಳು ಕಳೆದರೂ ಮುಂಬೈನ ನೆರೆ ಸ್ಥಿತಿ ಬದಲಾಗಿಲ್ಲ: ಹೈಕೋರ್ಟ್

ಮುಂಬೈ,ಸೆ.2: ಪ್ರಕೃತಿಯನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ, ಆದರೆ ಪ್ರತಿ ಮಳೆಗಾಲದಲ್ಲಿಯೂ ನೆರೆ ಸಮಸ್ಯೆಯನ್ನು ಎದುರಿಸುತ್ತಿರುವ ಮುಂಬೈ ಮಹಾನಗರದಲ್ಲಿನ ಸ್ಥಿತಿ ಕಳೆದ ಕೆಲವು ವರ್ಷಗಳಲ್ಲಿ ಒಂದಿನಿತೂ ಸುಧಾರಣೆಯಾಗಿಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಹೇಳಿದೆ.
ಜನರು ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕದಿರಲು ನಗರದಲ್ಲಿ ಇನ್ನೊಂದು ಡಾಪ್ಲರ್ ರಾಡಾರ್ ವ್ಯವಸ್ಥೆಯ ಸ್ಥಾಪನೆ ಮತ್ತು ಇತರ ಕ್ರಮಗಳನ್ನು ಕೋರಿ ನ್ಯಾಯವಾದಿ ಅಟಲ್ ಬಿಹಾರಿ ದುಬೆ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಮುಖ್ಯ ನ್ಯಾ.ಮಂಜುಳಾ ಚೆಲ್ಲೂರ್ ಮತ್ತು ನ್ಯಾ.ಎನ್.ಎಂ.ಜಾಮದಾರ್ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಕೆಲವು ವರ್ಷಗಳ ಹಿಂದೆ ಈ ಅರ್ಜಿಯನ್ನು ಸಲ್ಲಿಸಲಾಗಿದ್ದು, ಡಾಪ್ಲರ್ ರಾಡಾರ್ ಸ್ಥಾಪನೆಗಾಗಿ ಗೋರೆಗಾಂವ್‌ನಲ್ಲಿ ನಿವೇಶನವೊಂದನ್ನು ಗುರುತಿಸಲಾಗಿದೆ ಮತ್ತು ಮಂಜೂರಾತಿ ನೀಡಲಾಗಿದೆ ಎಂದು 2016ಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆ ನ್ಯಾಯಾಲಯಕ್ಕೆ ತಿಳಿಸಿದ್ದವು.
ಈ ವಿಷಯದಲ್ಲಿ ಈವರೆಗೂ ಯಾವುದೇ ಪ್ರಗತಿಯಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಮುಂದಿನ ವಿಚಾರಣೆಯು ಸೆ.7ರಂದು ನಡೆಯಲಿದೆ.







