ಹೆಲಿಕಾಪ್ಟರ್ ಹಗರಣ: ವಾಯುಪಡೆ ಮಾಜಿ ಮುಖ್ಯಸ್ಥ ತ್ಯಾಗಿ, ಇತರರ ವಿರುದ್ಧ ಆರೋಪಪಟ್ಟಿ ದಾಖಲು

ದಿಲ್ಲಿ, ಸೆ.2: ಆಗಸ್ಟ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿ ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಹಾಗೂ ಇತರ 9 ಮಂದಿಯ ವಿರುದ್ಧ ಸಿಬಿಐ 30,000 ಪುಟಗಳ ಆರೋಪಪಟ್ಟಿ ದಾಖಲಿಸಿದೆ.
ತ್ಯಾಗಿಯ ಸೋದರ ಸಂಬಂಧಿ ಸಂಜೀವ್ ಅಲಿಯಾಸ್ ಜೂಲಿ, ವಕೀಲ ಗೌತಮ್ ಖೇತಾನ್, ಮಧ್ಯವರ್ತಿ ಎನ್ನಲಾದ ಮೈಕೆಲ್ ಜೇಮ್ಸ್, ವಾಯುಪಡೆಯ ನಿವೃತ್ತ ವೈಸ್‌ಚೀಫ್ ಜೆ.ಎಸ್.ಗುಜ್ರಾಲ್, ಆಗಸ್ಟಾ ವೆಸ್ಟ್‌ಲ್ಯಾಂಡ್ ಸಂಸ್ಥೆಯ ಮಾಜಿ ಸಿಇಒ ಬ್ರೂನೊ ಸ್ಪಗ್ನೊಲಿನ್ , ಫಿನ್‌ಮೆಕ್ಯನಿಕ ಸಂಸ್ಥೆಯ ಮಾಜಿ ಅಧ್ಯಕ್ಷ ಗಿಸೆಪ್ ಒರ್ಸಿ ಮತ್ತು ಆಗಸ್ಟ ವೆಸ್ಟ್‌ಲ್ಯಾಂಡ್ ಸಂಸ್ಥೆಯನ್ನು ಆರೋಪಿ ಎಂದು ಹೆಸರಿಸಲಾಗಿದೆ.
ರಾಷ್ಟ್ರಪತಿ, ಪ್ರಧಾನಿ ಮತ್ತಿತರ ಅತೀಗಣ್ಯ (ವಿವಿಐಪಿ) ವ್ಯಕ್ತಿಗಳನ್ನು ಕರೆದೊಯ್ಯಲು ಭಾರತೀಯ ವಾಯುಪಡೆಯ ಸಂಪರ್ಕ ವಿಭಾಗಕ್ಕೆ ಪೂರೈಸಲಾದ 3,600 ಕೋಟಿ ರೂ. ಮೊತ್ತದ ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಗೆ ಲಂಚ ಪೂರೈಸಲಾಗಿದೆ ಎಂಬ ಆರೋಪವಿದೆ.
ಲಂಚದ ಹಣ ಭಾರತವನ್ನು ಹೇಗೆ ತಲುಪಿದೆ, ಹಣ ಪಡೆಯುವ ಉದ್ದೇಶಕ್ಕಾಗಿ ವಿವಿಧ ಸಂಸ್ಥೆಗಳನ್ನು ಹೇಗೆ ಸ್ಥಾಪಿಸಲಾಗಿದೆ ಮತ್ತು ಲಂಚದ ಹಣವನ್ನು ಭಾರತಕ್ಕೆ ತಲುಪಿಸಿದ ರೂವಾರಿ ಎನ್ನಲಾಗಿರುವ ಗೌತಮ್ ಖೇತಾನ್‌ಗೆ ಯುರೋಪ್‌ನ ದಲ್ಲಾಳಿ ಎನ್ನಲಾಗಿರುವ ಕಾರ್ಲೊ ಜೆರೊಸರ ಪರಿಚಯ ಹೇಗಾಯಿತು ಎಂಬುದರ ವಿವರವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಬಿಐ ಅಧಿಕಾರಿಯೋರ್ವರು ತಿಳಿಸಿದ್ದಾರೆ.
2007ರಲ್ಲಿ ನಿವೃತ್ತರಾದ ತ್ಯಾಗಿ, ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿ ಎಂದು ಸಿಬಿಐ ಗುರುತಿಸಲಾದ ಪ್ರಪ್ರಥಮ ವಾಯುಪಡೆ ಮುಖ್ಯಸ್ಥರಾಗಿದ್ದಾರೆ . ಪ್ರಕರಣಕ್ಕೆ ಸಂಬಂಧಿಸಿ ತ್ಯಾಗಿ , ಸಂಜೀವ್ ಹಾಗೂ ಖೇತಾನ್‌ರನ್ನು ಕಳೆದ ವರ್ಷದ ಡಿ.9ರಂದು ಬಂಧಿಸಲಾಗಿತ್ತು ಮತ್ತು ತ್ಯಾಗಿ ಡಿ.26ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ವಿವಿಐಪಿ ಹೆಲಿಕಾಪ್ಟರ್‌ಗೆ ಸೂಚಿಸಲಾಗಿದ್ದ ಗರಿಷ್ಠ ಪರಿಮಿತಿಯನ್ನು 6000 ಮೀಟರ್‌ನಿಂದ 4,500 ಮೀಟರ್‌ಗೆ ಇಳಿಸುವ ವಾಯುಪಡೆಯ ಪ್ರಸ್ತಾವನೆಗೆ ಆಗ ವಾಯುಪಡೆ ಮುಖ್ಯಸ್ಥರಾಗಿದ್ದ ತ್ಯಾಗಿ ಅನುಮತಿ ನೀಡಿದ್ದರು. ಇದು ಆಗಸ್ಟ ವೆಸ್ಟ್‌ಲ್ಯಾಂಡ್ ಸಂಸ್ಥೆಗೆ ಅನುಕೂಲ ಮಾಡಿಕೊಡುವ ಉದ್ದೇಶವಾಗಿದೆ ಎಂಬ ಆರೋಪವಿದೆ.







