ನೂರಾರು ಪ್ರಯಾಣಿಕರ ಜೀವಗಳನ್ನುಳಿಸಿದ್ದ ತುರಂತೊ ರೈಲಿನ ಚಾಲಕರಿಗೆ ಪುರಸ್ಕಾರ

ಹೊಸದಿಲ್ಲಿ,ಸೆ.2: ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಯಪ್ರಜ್ಞೆ ಮತ್ತು ಕರ್ತವ್ಯದಲ್ಲಿ ಅರ್ಪಣಾ ಮನೋಭಾವವನ್ನು ಮೆರೆಯುವ ಮೂಲಕ ನೂರಾರು ಪ್ರಯಾಣಿಕರ ಜೀವಗಳನ್ನುಳಿಸಿದ್ದ ನಾಗ್ಪುರ-ಮುಂಬೈ ತುರಂತೊ ಎಕ್ಸ್‌ಪ್ರೆಸ್ ರೈಲಿನ ಇಬ್ಬರು ಚಾಲಕರನ್ನು ಭಾರತೀಯ ರೈಲ್ವೆಯು ಶನಿವಾರ ಪುರಸ್ಕರಿಸಿತು.
ಆ.29ರಂದು ಮಹಾರಾಷ್ಟ್ರದ ವಾಶಿಂದ್ ಮತ್ತು ಅಸನಗಾಂವ್ ನಿಲ್ದಾಣಗಳ ನಡುವೆ ಭೂಕುಸಿತದಿಂದಾಗಿ ರೈಲಿನ ಇಂಜಿನ್ ಮತ್ತು ಒಂಭತ್ತು ಬೋಗಿಗಳು ಹಳಿ ತಪ್ಪಿದ್ದವು. ಇದು ಹತ್ತು ದಿನಗಳಲ್ಲಿ ರೈಲು ಹಳಿ ತಪ್ಪಿದ ನಾಲ್ಕನೇ ಘಟನೆಯಾಗಿತ್ತು.
ಅಪಘಾತ ಸಂಭವಿಸಿದ ದಿನದಂದು ಚಾಲಕ ವೀರೇಂದ್ರ ಸಿಂಗ್(52) ಮತ್ತು ಸಹಾಯಕ ಚಾಲಕ ಅಭಯ ಕುಮಾರ ಪಾಲ್(32) ಅವರ ಸಮಯಪ್ರಜ್ಞೆ ಮತ್ತು ಸೇವೆಯನ್ನು ಮನಸಾರೆ ಹೊಗಳಿದ ರೈಲ್ವೆ ಮಂಡಳಿಯ ಅಧ್ಯಕ್ಷ ಅಶ್ವನಿ ಲೋಹಾನಿ ಅವರು ಇಲಾಖೆಯ ಹಲವಾರು ಹಿರಿಯ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳ ಉಪಸ್ಥಿತಿಯಲ್ಲಿ ಅವರನ್ನು ಸನ್ಮಾನಿಸಿದರು.
ಕಡಿದಾದ ತಿರುವು ಮತ್ತು ಮಳೆಯಿಂದಾಗಿ ಗೋಚರ ದೂರವು ತುಂಬ ಕಡಿಮೆ ಯಿದ್ದರೂ ಭೂಕುಸಿತವನ್ನು ಗಮನಿಸಿದ್ದ ಚಾಲಕರು ತುರ್ತು ಬ್ರೇಕ್‌ಗಳನ್ನು ಹಾಕಿದ್ದರು. ಇದರಿಂದ ರೈಲಿನ ವೇಗ ಕಡಿಮೆಯಾಗಿದ್ದು, ಇಂಜಿನ್ ಮತ್ತು ಬೋಗಿಗಳು ಹಳಿ ತಪ್ಪಿದ್ದರೂ ಯಾವುದೇ ಸಾವುನೋವು ಸಂಭವಿಸದೇ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದರು.
ಅಪಘಾತದಿಂದ ಆಘಾತಗೊಂಡಿದ್ದರೂ ತಕ್ಷಣ ಚೇತರಿಸಿಕೊಂಡಿದ್ದ ಚಾಲಕರು ಪರಿಸ್ಥಿತಿಯ ಗಂಭೀರತೆಯ ಬಗ್ಗೆ ನಿಯಂತ್ರಣ ಕೊಠಡಿಗೆ ತುರ್ತು ಸಂದೇಶ ನೀಡಿದ್ದರು. ಇದರಿಂದಾಗಿ ಓವರ್‌ಹೆಡ್ ವಿದ್ಯುತ್ ಪೂರೈಕೆಯನ್ನು ಸಕಾಲದಲ್ಲಿ ಸ್ಥಗಿತಗೊಳಿಸಲು ಸಾಧ್ಯವಾಗಿತ್ತು ಮತ್ತು ಸಂಭಾವ್ಯ ಭಾರೀ ಅನಾಹುತ ತಪ್ಪಿತ್ತು.
ಮೆಚ್ಚುಗೆಯ ಕುರುಹಾಗಿ ಇಲಾಖೆಯು ಸಿಂಗ್ ಅವರಿಗೆ 10,000 ರೂ. ಮತ್ತು ಪಾಲ್‌ಗೆ 5,000 ರೂ.ಗಳ ನಗದು ಬಹುಮಾನವನ್ನೂ ನೀಡಿದೆ.







