ರಾಜಕೀಯವಾಗಿ ನಾನು ಮೊದಲಿನಿಂದಲೂ ಶಿಕ್ಷೆ ಅನುಭವಿಸುತ್ತಿದ್ದೇನೆ: ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು, ಸೆ. 2: ರಾಜ್ಯದ ಎಲ್ಲ ವರ್ಗದ ಜನರ ಅಭ್ಯುದಯಕ್ಕಾಗಿ ತಾನು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಿದೆ. ಆದರೂ, ತನ್ನನ್ನು ಒಕ್ಕಲಿಗರ ಪರ, ಉಳಿದವರ ವಿರೋಧಿ ಎಂದು ಬಿಂಬಿಸಿದರು. ತಾನು ರಾಜಕೀಯದಲ್ಲಿ ಮೊದಲಿನಿಂದಲೂ ಶಿಕ್ಷೆ ಅನುಭವಿಸುತ್ತೇಲೇ ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ಕುವೆಂಪು ಕಲಾಕ್ಷೇತ್ರದಲ್ಲಿ ಕೃಷಿಕ್ ಸರ್ವೋದಯ ಫೌಂಡೇಷನ್ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಆರ್.ಅಶೋಕ್ ಅಥವಾ ಎಚ್.ಡಿ. ಕುಮಾರಸ್ವಾಮಿ ಯಾರಾದರೂ ಮುಖ್ಯಮಂತ್ರಿ ಆಗಲಿ. ಅವರವರ ಹಣೆಬರಹ ಹೇಗಿದೆಯೋ ಅದೇ ಆಗಲಿದೆ ಎಂದು ನುಡಿದರು.
ಜೀವನದ ಕೊನೆ ದಿನಗಳಲ್ಲಿ ಒಕ್ಕಲಿಗ ಸಮಾಜ ಎಲ್ಲಿ ಸಾಗ್ತಿದೆ ಅಂತ ಯೋಚನೆ ಮಾಡ್ತಿದೀನಿ. ಕಾವೇರಿ ಕಣಿವೆಯಲ್ಲಿ ಜನರ ಪರಿಸ್ಥಿತಿ ಏನಾಗಿದೆ ಅಂತ ಆಲೋಚಿಸಬೇಕು ಎಂದ ಅವರು, ಕಾವೇರಿ ಕಣಿವೆ ಪ್ರದೇಶದ ಎರಡೂವರೆ ಕೋಟಿ ಜನರ ಬಗ್ಗೆ ಯೋಚಿಸಬೇಕಿದೆ ಎಂದು ಸಲಹೆ ನೀಡಿದರು.
ಇದೇ ವೇಳೆ ಮಾತನಾಡಿದ ಇಂಧನ ಸಚಿವ ಶಿವಕುಮಾರ್, ದೇವೇಗೌಡರು ಸಾಧನೆ ಮಾಡಿ ಪ್ರಧಾನಿ ಸ್ಥಾನ ಪಡೆದದ್ದು, ಅಷ್ಟು ಸುಲಭದ ಮಾತೇನಲ್ಲ. ಅವರು ಅಷ್ಟು ದೊಡ್ಡ ಸ್ಥಾನ ಅಲಂಕರಿಸಲು ಎಷ್ಟು ಉಳಿ ಏಟು ತಿಂದಿರಬಹುದು? ಎಷ್ಟೆಲ್ಲಾ ತೊಂದರೆಗಳನ್ನು ಎದುರಿಸಿದ್ದಾರೋ ಅವರಿಗೇ ಗೊತ್ತು. 50 ವರ್ಷದ ರಾಜಕಾರಣದಲ್ಲಿ ಎಷ್ಟೆಲ್ಲಾ ಸಮಸ್ಯೆ ಅನುಭವಿಸಿರಬೇಕು? ಈಗ ಅವರ ಮಕ್ಕಳು ಮೊಮ್ಮಕ್ಕಳನ್ನು ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದು, ಆ ರೀತಿ ಎಲ್ಲರೂ ವಿದ್ಯಾವಂತರಾಗಬೇಕು ಎಂದು ಕರೆ ನೀಡಿದರು.
ತಾನು ಮೂವತ್ತು ವರ್ಷಗಳಿಂದ ರಾಜಕಾರಣ ಮಾಡ್ತಿದ್ದೇನೆ. ನನಗೂ ಎಲ್ಲಾ ರೀತಿ ಪೆಟ್ಟು ಬಿದ್ದಿವೆ. ಉಳಿ ಏಟು, ಅಗರಿ ಏಟು ಬಿದ್ದಿವೆ. ನಾನಾಗಿರೋದಕ್ಕೆ ಏಟು ತಿಂದ್ರೂ ಇಲ್ಲಿ ನಿಂತಿದ್ದೇನೆ. ಬೇರೆಯವರಾಗಿದ್ದರೆ ಏನಾಗ್ತಿತ್ತು? ಎಂದು ಇದೇ ಸಂದರ್ಭದಲ್ಲಿ ನುಡಿದರು.
ನಾವು ಎರಡನೇ ದರ್ಜೆಯಲ್ಲಿದ್ದೇವೆ. ನಮ್ಮನ್ನು ಮೊದಲ ದರ್ಜೆಗೆ ಹೋಗೋಕೆ ಬಿಡಲ್ಲ. ಅಷ್ಟು ಸುಲಭವಾಗಿ ಮುಖ್ಯಮಂತ್ರಿಯಾಗಲು ಬಿಡ್ತಾರೆ ಅಂತ ತಿಳಿದು ಕೊಳ್ಳಬೇಡಿ. ಅದು ಅಷ್ಟು ಸುಲಭ ಇಲ್ಲ. ನಾನು ಅನುಭವಿಸಿದ್ದನ್ನೇ ಹೇಳ್ತಿದ್ದೀನಿ ಎಂದು ಹೇಳಿದರು.
ಇದೇ ವೇಳೆ ಮಾಜಿ ಪ್ರಧಾನಿ ದೇವೇಗೌಡರಿಗೆ ಹೂಮಾಲೆ ಹಾಕಿ ಸನ್ಮಾನಿಸಿದ ಶಿವಕುಮಾರ್, ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಸಮಾರಂಭದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







