ಸಮಾಜದ ಒಳಿತಿಗೆ ಡಾ.ಶಿವಕುಮಾರ ಸ್ವಾಮೀಜಿಗಳ ಸಹಮತವಿದೆ: ಜಯಮೃತ್ಯುಂಜಯ ಸ್ವಾಮೀಜಿ
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ
ಬೆಂಗಳೂರು, ಆ.2: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಸಮಾಜದ ಒಳಿತಿಗೆ ತಮ್ಮ ಸಹಮತವಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಜಂಟಿ ಹೇಳಿಕೆ ನೀಡಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸೆ.1ರಂದು ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳನ್ನು ಭೇಟಿಯಾಗಿ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿದಾಗ ಶ್ರೀಗಳು ಸಮಾಜದ ಒಳಿತಿಗೆ ತಮ್ಮ ಸಹಮತವಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗೇಶ್ವರ ಸ್ವಾಮೀಜಿಗಳೂ ಈ ಮಠವು ಬಸವಣ್ಣ ಹಾಗೂ ಸಿದ್ಧಲಿಂಗೇಶ್ವರರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದೆ. ಅಲ್ಲದೆ, ಎಲ್ಲರೂ ಹೊಂದಿಕೊಂಡು ಹೋಗುವ ಕೆಲಸವಾಗಲಿ ಹಾಗೂ ಶಾಂತಿಯನ್ನು ಕಾಪಾಡಿ ಎಂದು ಹೇಳಿದ್ದಾರೆ. ಆದರೆ, ಶಿವಕುಮಾರಸ್ವಾಮೀಜಿಗಳು ಲಿಂಗಾಯತ ಹಾಗೂ ವೀರಶೈವ ಧರ್ಮ ಒಂದೇ ಎಂದು ಹೇಳಿದ್ದಾರೆ ಎಂದು ರಂಭಾಪುರಿ ಶ್ರೀಗಳು ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ನೀಡಿದ್ದಾರೆ. ಆದರೆ, ಈ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ.ಜಯಣ್ಣ, ಜಿ.ಬಿ.ಪಾಟೀಲ್ ಉಪಸ್ಥಿತರಿದ್ದರು.







