‘ಹಾರ್ವೆ’ ಚಂಡಮಾರುತ: ಮೃತರ ಸಂಖ್ಯೆ 46ಕ್ಕೆ
ಭಾರತೀಯ ವಿದ್ಯಾರ್ಥಿನಿ ಪರಿಸ್ಥಿತಿ ಇನ್ನೂ ಗಂಭೀರ

ವಾಶಿಂಗ್ಟನ್, ಸೆ. 2: ಅಮೆರಿಕದ ಟೆಕ್ಸಾಸ್‌ನಲ್ಲಿ ಕಳೆದ ವಾರ ಪ್ರವಾಹದಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿರುವ ಭಾರತೀಯ ವಿದ್ಯಾರ್ಥಿನಿಯ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ.
ಈ ನಡುವೆ, ವಿನಾಶಕರ ‘ಹಾರ್ವೆ’ ಚಂಡಮಾರುತದ ಹಿನ್ನೆಲೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 46ಕ್ಕೇರಿದೆ.
ಬದುಕುಳಿದವರಿಗಾಗಿ ಶೋಧ ಮತ್ತು ರಕ್ಷಣ ಕಾರ್ಯಗಳನ್ನು ಮುಂದುವರಿಸಲಾಗಿದೆ. ಹಲವು ಮನೆಗಳು ಈಗಲೂ ಜಲಾವೃತವಾಗಿದ್ದು, ಸಾವಿರಾರು ಮಂದಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
ಪ್ರವಾಹದ ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿರುವ ಟೆಕ್ಸಾಸ್ ಎ ಆ್ಯಂಡ್ ಎಂ ವಿಶ್ವವಿದ್ಯಾನಿಲಯದ ಭಾರತೀಯ ವಿದ್ಯಾರ್ಥಿನಿ ಶಾಲಿನಿ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕುಟುಂಬ ಸದಸ್ಯರು ಅವರ ಪಕ್ಕದಲ್ಲಿದ್ದಾರೆ.
ಇದೇ ವಿಶ್ವವಿದ್ಯಾನಿಲಯದ ಇನ್ನೋರ್ವ ವಿದ್ಯಾರ್ಥಿ ನಿಖಿಲ್ ಭಾಟಿಯ ಮೃತಪಟ್ಟಿದ್ದಾರೆ ಎಂಬುದಾಗಿ ಈಗಾಗಲೇ ಘೋಷಿಸಲಾಗಿದೆ.
ಹ್ಯೂಸ್ಟನ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಯೊಂದಿಗೆ ಸಂಪರ್ಕ ಹೊಂದಿರುವ ಎಲ್ಲ ಭಾರತೀಯರು ಮತ್ತು ಭಾರತ ಮೂಲದ ಅಮೆರಿಕನ್ನರು ಸುರಕ್ಷಿತವಾಗಿದ್ದಾರೆ. ಆದಾಗ್ಯೂ, ಅವರ ಪೈಕಿ ಕೆಲವರು ನೆರೆಪೀಡಿತ ಪ್ರದೇಶಗಳಲ್ಲೇ ವಾಸಿಸುತ್ತಿದ್ದಾರೆ.
ಜಲಾಶಯಗಳಿಂದ ಹೊರಬಿಡಲಾಗುತ್ತಿರುವ ನೀರಿನಿಂದಾಗಿ ಕ್ಯಾಟಿ ಮತ್ತು ಶುಗರ್ ಲ್ಯಾಂಡ್ ಮುಂತಾದ ಹ್ಯೂಸ್ಟನ್‌ನ ಹಲವು ಪ್ರದೇಶಗಳು ಈಗಲೂ ಪ್ರವಾಹಪೀಡಿತವಾಗಿವೆ.
ಭೀಕರ ಪರಿಣಾಮದ ಪ್ರಾಕೃತಿಕ ವಿಕೋಪ
ಹಿಂದಿನ ವಾರದ ಶುಕ್ರವಾರ ಅಮೆರಿಕದ ರಾಜ್ಯ ಟೆಕ್ಸಾಸ್‌ಗೆ ಅಪ್ಪಳಿಸಿದ ‘ಹಾರ್ವೆ’ ಚಂಡಮಾರುತ ಅಮೆರಿಕ ಇತಿಹಾಸದ ಅತ್ಯಂತ ವಿನಾಶಕಾರಿ ಚಂಡಮಾರುತಗಳ ಪೈಕಿ ಒಂದಾಗಿದೆ.
ಅದು ಒಂದು ಲಕ್ಷ ಮನೆಗಳ ಮೇಲೆ ಪ್ರಭಾವ ಬೀರಿದೆ ಹಾಗೂ 30,000ಕ್ಕೂ ಅಧಿಕ ಜನರು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.







