ಕುಡಿದ ಅಮಲಿನಲ್ಲಿ ಮಗನಿಂದ ತಂದೆಯ ಹತ್ಯೆ

ಬೆಂಗಳೂರು, ಆ.2: ಕುಡಿದ ಅಮಲಿನಲ್ಲಿ ಉಂಟಾದ ಜಗಳದಲ್ಲಿ ಸಿಟ್ಟಿಗೆದ್ದು ಮಗನು ತಂದೆಯನ್ನು ಕೊಲೆಗೈದ ಘಟನೆ ಶ್ರೀರಾಮಪುರದಲ್ಲಿ ನಡೆದಿದೆ.
ಮೃತನನ್ನು ನೇಪಾಳ ಮೂಲದ ಪ್ರೇಮರಾಜ್(45) ಎಂದು ಗುರುತಿಸಲಾಗಿದೆ. ಶ್ರೀರಾಂಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದ ಕೃಷ್ಣ ಜೋಶಿ(20) ಬಂಧಿತ ಆರೋಪಿಯಾಗಿದ್ದಾನೆ. ಕುಡಿದ ಅಮಲಿನಲ್ಲಿ ಶುಕ್ರವಾರ ರಾತ್ರಿ ತಂದೆ ಪ್ರೇಮರಾಜ್‌ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದನು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ನೇಪಾಳ ಮೂಲದ ಪ್ರೇಮರಾಜ್ ಕೆಲಸ ಹುಡುಕಿಕೊಂಡು ಪತ್ನಿ ಹಾಗೂ ಮಗನ ಸಮೇತ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಅವರು ಇತ್ತೀಚಿಗೆ ಸರಿಯಾಗಿ ಕೆಲಸಕ್ಕೆ ಹೋಗದೆ ದಿನವೂ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು.
ಈ ವರ್ತನೆಯಿಂದ ಬೇಸತ್ತಿದ್ದ ಆರೋಪಿ ಕೃಷ್ಣ ಜೋಶಿ ರಾತ್ರಿ ತಾನೂ ಕುಡಿದು ಮನೆಗೆ ಬಂದಿದ್ದ ಈ ವೇಳೆ ಕುಡಿದ ಅಮಲಿನಲ್ಲಿದ್ದ ತಂದೆ, ಪತ್ನಿ ಹಾಗೂ ಮಗನೊಂದಿಗೆ ಜಗಳ ತೆಗೆದಿದ್ದರು. ಈ ವೇಳೆ ಕೃಷ್ಣ ಚಾಕುವಿನಿಂದ ಅವರ ಎದೆಗೆ ಇರಿದಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಪ್ರೇಮರಾಜ್ ಮೃತಪಟ್ಟರು. ಮೊಕದ್ದಮೆ ದಾಖಲಿಸಿಕೊಂಡಿರುವ ಶ್ರೀರಾಂಪುರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.





