ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಸರ್ಜಿಲ್ ದಾಳಿಯಾಗಿದೆ: ಎಂ.ವೀರಪ್ಪ ಮೊಯ್ಲಿ

ಮಂಗಳೂರು, ಸೆ.2: ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಆರ್ಥಿಕ ಬೆಳವಣಿಗೆಯಲ್ಲಿ ದೊಡ್ಡ ಪ್ರಮಾಣದ ಕುಸಿತವಾಗಿದೆ. ದೇಶದಲ್ಲಿ ನೋಟ್ ಅಮಾನ್ಯಗೊಳಿಸಿ ಆರ್ಥಿಕ ವ್ಯವಸ್ಥೆಯ ಮೇಲೆ ಸರ್ಜಿಕಲ್ ದಾಳಿಯಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಸುದ್ದಿಗೋಷ್ಠಿಯಲ್ಲಿಂದು ಟೀಕಿಸಿದ್ದಾರೆ.
ರಾಜೀವ್ ಗಾಂಧಿ ಇದ್ದಿದ್ದರೆ ತಮ್ಮ ಹುದ್ದೆಗೆ ರಾಜಿನಾಮೆ ನೀಡುತ್ತಿದ್ದರು. ಈ ರೀತಿಯ ಆರ್ಥಿಕ ಅರಾಜಕತೆ ದೇಶದಲ್ಲಿ ಈ ಹಿಂದೆ ನಡೆದಿಲ್ಲ. ಆದರೆ ಈಗಿನ ಪ್ರಧಾನಿ ರಾಜಿ ನಾಮೆ ನೀಡಲು ಸಿದ್ಧರಿಲ್ಲ. ಈ ವರ್ಷದ ಜಿಡಿಪಿ ಹೊಸ ನಿಯಮಾವಳಿಯ ಪ್ರಕಾರವೂ 5.7ಕ್ಕೂ ಕೆಳಗೆ ಕುಸಿಯುವ ಬಗ್ಗೆ ವರದಿ ಬಂದಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆ 7ಕ್ಕಿಂತ ಕೆಳಗೆ ಕುಸಿದಿದರಲಿಲ್ಲ. ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರವ್ಯಾಪಿ ಜಾಗೃತಿ ಆಂದೋಲನ ಮಾಡಬೇಕಾಗಿದೆ ಎಂದು ಮೊಯ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಜನರ ಮನ ಗೆದ್ದಿದೆ :- ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಜನರ ಮನ ಗೆದ್ದಿದೆ ಜನಸಾಮಾನ್ಯರನ್ನು ತಲುಪುವ ಕಾರ್ಯಕ್ರಮ ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಯಶಸ್ಸುಗಳಿಸಿದೆ. ಅದರಿಂದಾಗಿ ಮುಂದಿನ ಚುನಾವಣೆಯಲ್ಲಿ ನಿರೀಕ್ಷೆಗಿಂತಲೂ ಅಧಿಕ ಸ್ಥಾನಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿದೆ.
ಕೇಂದ್ರ ಸರಕಾರ ಮಾತಿನಲ್ಲಿ ಮಾತ್ರ ಯೋಜನೆಗಳನ್ನು ಘೊಷಿಸಿದೆ ಕಾರ್ಯದಲ್ಲಿ ಇಲ್ಲ. ಅತ್ಯಂತ ಕೆಟ್ಟ ರೀತಿಯ ಆರ್ಥಿಕ ನಿರ್ವಹಣೆ ಕೇಂದ್ರದಲ್ಲಿದೆ. ಗಡಿಯಲ್ಲಿ ಭಯೊತ್ಪಾದನೆ ಹೆಚ್ಚಿದೆ. ವಿದೇಶಾಂಗ ನೀತಿಯಲ್ಲೂ ಸರಕಾರ ಎಡವಿದೆ ಎಂದು ಮೊಯ್ಲಿ ಟೀಕಿಸಿದರು.
ರಾಜ್ಯದಲ್ಲಿ ಪಕ್ಷದ ಸಂಘಟನೆ ಬೂತ್‌ಮಟ್ಟದಿಂದಲೂ ಉತ್ತಮವಾಗಿದೆ. ಕಾಂಗ್ರೆಸ್‌ನ ಸಾಧನೆಯನ್ನು ಜನರಿಗೆ ತಿಳಿಸುವ ಅಭಿಯಾನ ಆರಂಭಿಸಲಾಗುವುದು ಎಂದು ಮೊಯ್ಲಿ ತಿಳಿಸಿದರು.
ರಾಜ್ಯದ ಮಂತ್ರಿ ಮಂಡಲ ಪುನಾರಚನೆಯ ಸಂದರ್ಭದಲ್ಲಿ ಗೃಹ ಸಚಿವರಾಗಿ ರಮಾನಾಥ ರೈ ಯನ್ನು ಆಯ್ಕೆ ಮಾಡದಿರುವುದರಲ್ಲಿ ಗೊಂದಲವಿಲ್ಲ. ಗೃಹ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಅವರಲ್ಲಿದೆ. ನಾನೇ ಅವರನ್ನು ಗೃಹ ಸಚಿವರನ್ನಾಗಿ ಆಯ್ಕೆ ಮಾಡಿದ್ದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಚಿವರುಗಳಾದ ಬಿ.ರಮಾನಾಥ ರೈ, ಯು.ಟಿ.ಖಾದರ್ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜ, ಮೇಯರ್ ಕವಿತಾ ಸನಿಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಕಾದರ್, ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ನವಿನ್ ಡಿ ಸೋಜ, ಶಾಲೆಟ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.







