ಭಟ್ಕಳ: ಪ್ರಾಣಿಬಲಿ ವಿಚಾರದಲ್ಲಿ ಸಂಘಪರಿವಾರದ ಸಂಘಟನೆಗಳಿಂದ ಪ್ರತಿಭಟನೆ
ಭಟ್ಕಳ, ಸೆ.2: ಬಕ್ರೀದ್ ಹಬ್ಬಕ್ಕಾಗಿ ಅಕ್ರಮ ಪ್ರಾಣಿಬಲಿ ನಡೆಯುತ್ತಿದ್ದು ಪೊಲೀಸರು ಯಾವುದೇ ಕ್ರಮ ಜರಗಿಸುತ್ತಿಲ್ಲ ಎಂದು ಆರೋಪಿಸಿ ಸಂಘಪರಿವಾರಕ್ಕೆ ಸೇರಿದ ಹಿಂದೂ ಜಾಗರಣ ಸಮಿತಿ, ಬಿಜೆಪಿ ಹಾಗೂ ಮತ್ತಿತರರ ಸಂಘಟನೆಗಳಿಂದ ಶನಿವಾರ ನಗರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಭಟ್ಕಳದಲ್ಲಿ ಅಕ್ರಮವಾಗಿ ಜಾನುವಾರುಗಳ ಹತ್ಯ ನಡೆಯುತ್ತಿದ್ದರೂ ಪೊಲೀಸರು ಹಾಗೂ ಜಿಲ್ಲಾಡಳಿತ ಕಣ್ಣುಮುಚ್ಚಿಕೊಂಡಿದೆ, ಅದು ಜಾನುವಾರು ಹತ್ಯಗೆ ಪರೋಕ್ಷವಾಗಿ ಸಹರಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನೆಕಾರರು ಕೂಡಲೆ ಪ್ರಾಣಿಬಲಿಯನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಎಸ್.ಪಿ. ಭೇಟಿ: ಭಟ್ಕಳದಲ್ಲಿ ಸಂಘಪರಿವಾರದಿಂದ ಪ್ರತಿಭಟನೆ ನಡೆಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಭಟ್ಕಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠ ವಿನಾಯಕ ಪಾಟಿಲ್ ಪ್ರತಿಭಟನಕಾರರೊಂದಿ ಮಾತನಾಡಿ ಕಾನೂನು ಪ್ರಕಾರ ಸೂಕ್ತ ಕ್ರಮ ಜರಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತಂಝೀಮ್ ಸದಸ್ಯರಿಂದ ಎಸ್.ಪಿ ಭೇಟಿ: ಈ ಸಂದರ್ಭದಲ್ಲಿ ಇಲ್ಲಿನ ಮಜ್ಲಿಸೆ ಇಸ್ಲಾಹ್ -ವ-ತಂಝೀಮ್ ನಿಯೋಗವು ಜಿಲ್ಲಾ ಪೊಲೀಸ್ ವರಿಷ್ಠರನ್ನು ಭೇಟಿ ಮಾಡಿ ಭಟ್ಕಳದಲ್ಲಿ ಬಕ್ರೀದ್ ಹಬ್ಬಕ್ಕೆ ತೊಂದರೆ ನೀಡುತ್ತಿರುವವರನ್ನು ಕೂಡಲೇ ಬಂಧಿಸಿ ಕ್ರಮ ಜರಗಿಸಬೇಕೆಂದು ಆಗ್ರಹಿಸಿದ್ದು, ಈಗಾಗಲೆ ಇಲ್ಲಿ ಶಾಂತಿ ನೆಲೆಸಿದೆ. ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನ್ನು ಶಾಂತಿಯುತವಾಗಿ ನೆರವೇರಿಸಲು ಬಿಡದ ಕೆಲ ಫ್ಯಾಸಿಷ್ಟ್ ಶಕ್ತಿಗಳನ್ನು ಪೊಲೀಸರು ಮಟ್ಟಹಾಕಬೇಕೆಂದು ತಂಝೀಮ್ ನಿಯೋಗ ಪೊಲೀಸ್ ವರಿಷ್ಠರನ್ನು ಆಗ್ರಹಿಸಿದೆ.







