ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವತಿ ಇಬ್ಬರಿಗೆ ಜೀವ ನೀಡಿದಳು !
ಜಗತ್ತಿನಲ್ಲೇ ಪ್ರಥಮ

ಹೊಸದಿಲ್ಲಿ, ಸೆ.2: ನಗರದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ 19ರ ಹರೆಯದ ಯುವತಿ ಇಬ್ಬರಿಗೆ ಅಂಗಾಂಗ ದಾನ ಮಾಡುವ ಮೂಲಕ ಮರು ಜೀವ ನೀಡಿದ್ದಾಳೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರ ಅಂಗಾಂಗ ದಾನ ಮಾಡುತ್ತಿರುವುದು ಜಗತ್ತಿನಲ್ಲೇ ಇದೇ ಮೊದಲು.
ವಿಷ ಸೇವಿಸಿ ಹಾಗೂ ಹೃದಯಾಘಾತದಿಂದ ಮೃತಪಟ್ಟವರ ಅಂಗಗಳನ್ನು ಕಸಿ ಮಾಡುವುದು ಜಗತ್ತಿನಲ್ಲಿ ಇದೇ ಮೊದಲು ಎಂದು ಸಫ್ದರ್‌ಜಂಗ್ ಆಸ್ಪತ್ರೆಯ ಅಧ್ಯಾಪಕ ಡಾ. ಅನೂಪ್ ಕುಮಾರ್ ತಿಳಿಸಿದ್ದಾರೆ.
ದಕ್ಷಿಣ ದಿಲ್ಲಿಯ ಛತ್ತರ್‌ಪುರದ ನಿವಾಸಿ ಮುಖೇಶ್ ಪಂಡಿತ್ ಅವರ ಹಿರಿಯ ಪುತ್ರಿ ಶಕುಂತಲಾ ಹೆತ್ತವರೊಂದಿಗೆ ಮಾತಿಗೆ ಮಾತು ಬೆಳೆದು ಆತಹತ್ಯೆ ಮಾಡಿಕೊಂಡರು. ಮನೆಯಲ್ಲಿದ್ದ ಕೀಟನಾಶಕವನ್ನು ಅವರು ಸೇವಿಸಿದ್ದರು. ಇದರಿಂದ ಅವರು ವಾಂತಿ ಮಾಡಲು ಆರಂಭಿಸಿದರು ಹಾಗೂ ಪ್ರಜ್ಞೆ ಕಳೆದುಕೊಂಡರು. ಹೆತ್ತವರು ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದರು. ಮೆದುಳಿಗೆ ರಕ್ತ ಪೂರೈಕೆಯ ಮೇಲೆ ವಿಷ ತೊಂದರೆ ಉಂಟು ಮಾಡಿತು. ಇದರಿಂದ ಅವರನ್ನು ಬುಧವಾರ ಮೆದುಳು ನಿಷ್ಕ್ರಿಯ ಎಂದು ವೈದ್ಯರು ಘೋಷಿಸಿದ್ದರು.
ಅಂಗ ಕಸಿ ಸಂಯೋಜಕರು ಆಕೆಯ ಹೆತ್ತವರನ್ನು ಅಂಗಾಂಗ ದಾನ ಮಾಡುವಂತೆ ಕೋರಿದರು. ಹೆತ್ತವರು ಅನುಮತಿ ನೀಡಿದರು. ಅದರಂತೆ ಶಾಕುಂತಳ ಅವರ ಒಂದು ಕಿಡ್ನಿಯನ್ನು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ 39ರ ವರ್ಷದ ಮಹಿಳೆಗೆ ನೀಡಲಾಗಿದೆ. ಕಿಡ್ನಿ ಕಸಿ ಮಾಡದೇ ಇದ್ದಿದ್ದರೆ, ಆ ಮಹಿಳೆ ಎರಡು ವರ್ಷಗಳಿಗಿಂತ ಹೆಚ್ಚು ಬದುಕುವ ಸಾಧ್ಯತೆ ಇರಲಿಲ್ಲ ಎಂದು ಕುಮಾರ್ ಹೇಳಿದ್ದಾರೆ.
ಇನ್ನೊಂದು ಕಿಡ್ನಿ ಕಸಿಯನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಹೃದಯ ಕಸಿ ಮಾಡಲು ಸಾಧ್ಯವಾಗಿಲ್ಲ. ಯಾಕೆಂದರೆ, ಅದು ಸ್ತಂಭನವಾಗಿದೆ. ವಿಷ ಆವರಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಿತ್ತ ಕೋಶವನ್ನು ಕಸಿ ಮಾಡಿಲ್ಲ ಎಂದು ಕುಮಾರ್ ಹೇಳಿದ್ದಾರೆ.
ಮಗಳ ಸಾವಿನಿಂದ ಆಘಾತಗೊಂಡಿರುವ ಮುಖೇಶ್ ಪಂಡಿತ್, ನನ್ನ ಮಗಳು ಇಬ್ಬರಿಗೆ ಜೀವದಾನ ಮಾಡಿರುವುದು ನನಗೆ ಹೆಮ್ಮೆ ಇದೆ ಎಂದಿದ್ದಾರೆ.







