Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಇಂಗ್ಲಿಷ್‌ಗೊಂದು ‘ಕವಿರಾಜ ಮಾರ್ಗ’

ಇಂಗ್ಲಿಷ್‌ಗೊಂದು ‘ಕವಿರಾಜ ಮಾರ್ಗ’

ಜಿ.ಎನ್.ರಂಗನಾಥ ರಾವ್ಜಿ.ಎನ್.ರಂಗನಾಥ ರಾವ್3 Sept 2017 12:12 AM IST
share
ಇಂಗ್ಲಿಷ್‌ಗೊಂದು ‘ಕವಿರಾಜ ಮಾರ್ಗ’

ಇಂದು (ಸೆ.3) ಹೊಸದಿಲ್ಲಿಯಲ್ಲಿ ಲೋಕಾರ್ಪಣೆಗೊಳ್ಳಲಿರುವ ‘ಕವಿರಾಜಮಾರ್ಗ’ದ ಇಂಗ್ಲಿಷ್ ಅನುವಾದದಿಂದ ಅನ್ಯಭಾಷಿಕರಿಗೆ ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನದ ಹೆಬ್ಬಾಗಿಲು ತೆರೆದಂತಾಗಿದೆ. ಇಂಥದೊಂದು ಮಹತ್ವದ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿರುವ ಜೆಎನ್‌ಯು ಕನ್ನಡ ಪೀಠದ ಪುರುಷೋತ್ತಮ ಬಿಳಿಮಲೆ ಮತ್ತು ಅನುವಾದಕರಾದ ಪ್ರೊ.ಸುಂದರಂ ಮತ್ತು ಪ್ರೊ. ಪಟೇಲ್ ಕನ್ನಡಿಗರ ಕೃತಜ್ಞತಾಪೂರ್ವಕ ಅಭಿನಂದನೆಗೆ ಅರ್ಹರು.

ನಾವು ಕನ್ನಡಿಗರು ನಾಡು-ನುಡಿ ಬಗ್ಗೆ ಹೆಮ್ಮೆ-ಅಭಿಮಾನಗಳನ್ನು ವ್ಯಕ್ತಪಡಿಸುವಾಗ, ಕನ್ನಡಿಗರು ‘ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿ’ಗಳೆಂದೂ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಗಡಿ ಹೊಂದಿತ್ತೆಂದೂ ಜಂಬ ಕೊಚ್ಚಿಕೊಳ್ಳುತ್ತೇವೆ. ಹೀಗೆ ಅಭಿಮಾನಧನರಾಗಿರುವಾಗ ಇದನ್ನು ಯಾರು ಹೇಳಿದ್ದು, ಯಾವಾಗ ಹೇಳಿದ್ದು, ಇದರ ಸತ್ಯಾಸತ್ಯತೆ ಎಷ್ಟು ಎಂಬುದನ್ನೆಲ್ಲ ವಿಚಾರಿಸುವ ಗೋಜಿಗೆ ಹೋಗುವುದಿಲ್ಲ.ಅಷ್ಟೇಕೆ ಇದರ ಮೂಲ ಆಕರ ‘ಕವಿರಾಜ ಮಾರ್ಗ’ಎಂಬ ಗ್ರಂಥ ಎನ್ನುವ ಅರಿವೂ ಎಷ್ಟೋ ಮಂದಿಗಿರುವುದಿಲ್ಲ. ‘ಕವಿರಾಜ ಮಾರ್ಗ’ವು ಎಲ್ಲ ದೃಷ್ಟಿಯಿಂದ ಕನ್ನಡದ ಆದ್ಯಗ್ರಂಥವಾಗಿದೆ.

ಮೊದಲನೆಯ ಉಪಲಬ್ಧ ಗ್ರಂಥ, ಮೊದಲನೆಯ ಅಲಂಕಾರ ಗ್ರಂಥ, ವಿಚಾರ ಸಂಪತ್ತಿನಿಂದ ಬೆಲೆಯುಳ್ಳ ಕೃತಿ ಎಂದು ಕನ್ನಡ ಸಾಹಿತ್ಯ ಚರಿತ್ರಕಾರರ ಅಂಬೋಣ. ಕವಿರಾಜ ಮಾರ್ಗದ ಕರ್ತೃ ಮತ್ತು ಕಾಲದ ಬಗ್ಗೆ ವಿದ್ವತ್ ವಲಯದಲ್ಲಿ ಸಾಕಷ್ಟು ಸಂಶೋಧನೆ, ಚರ್ಚೆಗಳು ನಡೆದಿವೆ. ವಿದ್ವಾಂಸರಿಂದಲೂ ಬಂದಿರುವ ಬಹುಮತದ ಅಭಿಪ್ರಾಯದ ಪ್ರಕಾರ ಈ ಗ್ರಂಥದ ಕಾಲ ಕ್ರಿ.ಶ. 870. ಕ್ರಿ.ಶ.814-877ರ ಅವಧಿಯಲ್ಲಿ ರಾಷ್ಟ್ರಕೂಟರ ಪ್ರಮುಖ ದೊರೆಯಾದ ಅಮೋಘವರ್ಷ ನೃಪತುಂಗನು, ಮಾನ್ಯಖೇಟ(ಈಗಿನ ಮಳಖೇಡ) ರಾಜಧಾನಿಯಿಂದ ಕಾವೇರಿ-ಗೋದಾವರಿ ನದಿಗಳ ನಡುವಣ ವಿಶಾಲ ರಾಜ್ಯವನ್ನಾಳುತ್ತಿದ್ದ. ನೃಪತುಂಗನ ಆಸ್ಥಾನ ಕವಿಯಾಗಿದ್ದ ಶ್ರೀವಿಜಯನೆಂಬವನು ಕ್ರಿ.ಶ.870ರ ಸುಮಾರಿಗೆ ಈ ಕೃತಿಯನ್ನು ರಚಿಸಿರಬೇಕು. 

ಈ ಕೃತಿಯು ಮುಖ್ಯವಾಗಿ ದೊರೆ ನೃಪತುಂಗನ ಆಕಾಂಕ್ಷೆ -ಅಭಿಮತ-ಮಾರ್ಗದರ್ಶನಗಳನ್ನು ಅವಲಂಬಿಸಿ ಅವನ ಅಂತಿಮ ಮುದ್ರೆಯನ್ನು ಪಡೆದು ಹೊರಬಂದಿದೆ ಎನ್ನುತ್ತಾರೆ ಸಂಶೋಧಕರು. ಕೃತಿಯ ಪಠ್ಯರಚನೆಯು ಶ್ರೀವಿಜಯನದೇ ಆಗಿದ್ದರೂ ಕೃತಿಯ ಹೊಣೆಗಾರಿಕೆ ಇಬ್ಬರದೂ ಆಗಿದ್ದು ಅಂತಿಮ ಅಧಿಕೃತ ಮುದ್ರೆಯು ನೃಪತುಂಗನದೇ ಆಗಿದೆ. ಹೀಗಿದ್ದರೂ ಕೆಲವರು ವಿದ್ವಾಂಸರಿಗೆ ಕವಿರಾಜ ಮಾರ್ಗವು ಕ್ರಿ.ಶ.ಸುಮಾರು ಏಳನೆ ಶತಮಾನದಲ್ಲಿದ್ದ ದಾಕ್ಷಿಣಾತ್ಯನಾದ ದಂಡಿ ಎಂಬ ಕವಿಯ ‘ಕಾವ್ಯಾದರ್ಶ’ ಹಾಗೂ ಭಾಮಹ ಎಂಬ ಕವಿಯ ‘ಕಾವ್ಯಾಲಂಕಾರ’ ಕೃತಿಯ ಸಂಗ್ರಹಾನುವಾದವಾಗಿ ಕಂಡಿದೆ.

ಲಕ್ಷಣಕ್ಕೆ ಸಂಬಂಧಿಸಿದಂತೆ ‘ಕವಿರಾಜ ಮಾರ್ಗ’ವು ಅನೇಕ ಪದ್ಯಗಳನ್ನು ಆಯ್ದು ಅನುವಾದಿಸಿಕೊಂಡಿರುವುದು ನಿಜವಾದರೂ, ಲಕ್ಷ್ಯ ಪದ್ಯಗಳಲ್ಲಿ ಕೆಲವನ್ನು ಮಾತ್ರ ಬಿಟ್ಟರೆ ಉಳಿದವು ಸ್ವತಂತ್ರ ರಚನೆಗಳೆಂದು ಕೆ.ವಿ.ಸುಬ್ಬಣ್ಣನವರು ಅಭಿಪ್ರಾಯಪಡುತ್ತಾರೆ. ಈ ಒಂದೆರಡು ಅಪವಾದಗಳನ್ನು ಬಿಟ್ಟರೆ ಕವಿರಾಜ ಮಾರ್ಗ ಸ್ವತಂತ್ರವಾದ ಅಲಂಕಾರ ಗ್ರಂಥ. ಪಂಡಿತರು ಇದನ್ನು ಅಲಂಕಾರ ಗ್ರಂಥವೆಂದು ಮಾನ್ಯಮಾಡಿದ್ದಾರಾದರೂ ಇದರಲ್ಲಿ ಅಲಂಕಾರ ಶಾಸ್ತ್ರಕ್ಕೆ ನೇರವಾಗಿ ಸಂಬಂಧಿಸದ ಹತ್ತುಹನ್ನೊಂದು ವಿಚಾರಗಳ ಮಂಡನೆಯನ್ನು ವಿಮರ್ಶಕರು ಗುರುತಿಸಿದ್ದಾರೆ. ವ್ಯಾಕರಣ, ಭಾಷಾ ಶಾಸ್ತ್ರ,ಛಂದಸ್ಸು, ಕನ್ನಡ ನಾಡು-ನುಡಿ-ಕನ್ನಡ ಸಂಸ್ಕೃತಿ-ರಾಜಕಾರಣ ಇತ್ಯಾದಿ ವಿಷಯಗಳೂ ಇಲ್ಲಿ ಪ್ರಮುಖವಾಗಿ ಪ್ರಸ್ತಾಪಿತವಾಗಿವೆ.

ಈ ಕೃತಿಗೆ ಕವಿರಾಜ ಮಾರ್ಗ ಎಂಬ ಹೆಸರು ಏಕೆ ಬಂತು ಎಂಬ ಪ್ರಶ್ನೆಯೂ ಸಂಶೋಧಕರನ್ನು ಕಾಡದೇ ಇಲ್ಲ. ಕವಿ ಅಥವಾ ಕವಿಗಳ ರಾಜಮಾರ್ಗ, ಕವಿಗಳ ರಾಜನಂತಿರುವವನು ಸಮೆಸಿದ ಮಾರ್ಗ, ಕವಿ ಮತ್ತು ರಾಜ ಕೂಡಿ ನಿರ್ಮಿಸಿದ ಮಾರ್ಗ ಇತ್ಯಾದಿ ವ್ಯಖ್ಯಾನಗಳೂ ಇವೆ. ನಮ್ಮ ಕಾಲದ ಕೆ.ವಿ ಸುಬ್ಬಣ್ಣನವರು, ಇವತ್ತಿಗೆ ಹೆಚ್ಚು ಸಂಗತ ಎನ್ನಿಸಬಹುದಾಂಥ ಇನ್ನೆರಡು ವ್ಯಾಖ್ಯಾನಗಳನ್ನು ನೀಡಿದ್ದಾರೆ. 1. ಕವಿ ಮತ್ತು ರಾಜ ಜಂಟಿಯಾಗಿ ನಿರ್ಮಿಸಿದ ಮಾರ್ಗ. 2. ಕವಿ ಮತ್ತು ರಾಜ ಜಂಟಿಯಾಗಿ ನಿರ್ಮಿಸಿದ ಮಾರ್ಗ ಎನ್ನುವುದನ್ನು ಮುಖ್ಯಾರ್ಥವಾಗಿಯೂ ಉಳಿದುದನ್ನು ಧ್ವನ್ಯಾರ್ಥವಾಗಿಯೂ ಗ್ರಹಿಸಬೇಕೇಂಬುದು ಸುಬ್ಬಣ್ಣನವರ ನಿಲುವು. ಈ ಹಲವು ಅರ್ಥಗಳನ್ನು ತಿಳಿದೇ ಶ್ರೀವಿಜಯನು ‘ಕವಿರಾಜ ಮಾರ್ಗ’ ಶೀರ್ಷಿಕೆಯನ್ನು ಅಯ್ಕೆಮಾಡಿಕೊಂಡಿರಬೇಕು. ಕವಿಯಾಗಿರುವ ರಾಜನು ನಿರ್ಮಿಸಿದ್ದು ಎಂಬ ಧ್ವನಿಯೂ ತನ್ನ ಪ್ರೀತಿಪಾತ್ರನಾದ ರಾಜನಿಗೆ ಪ್ರಿಯವಾದೀತು ಅಂತಲೇ ಶ್ರೀವಿಜಯ ಇದನ್ನು ಆಯ್ಕೆಮಾಡಿಕೊಂಡಿರಬೆಕು ಎನ್ನುತ್ತಾರೆ ಸುಬ್ಬಣ್ಣನವರು.

ಕನ್ನಡ ಭಾಷೆಯ ಸತ್ತ್ವವನ್ನು, ಕನ್ನಡ ನಾಡಿನ ಆಗಿನ ಪ್ರಭಾವಗಳನ್ನು ಸ್ಪಷ್ಟವಾಗಿ ಗುರುತಿಸಿರುವ ‘ಕವಿರಾಜಮಾರ್ಗ’ ಕನ್ನಡ ಕಾವ್ಯದ ವಿಶಿಷ್ಟತೆಗಳನ್ನೂ ಲಕ್ಷಿಸಿದೆ. ‘ಗದ್ಯ ಕಥೆ’, ‘ಬೆದಂಡೆ’, ‘ಚತ್ತಾಣ’ ಎಂಬ ಗದ್ಯಪದ್ಯ ಬಂಧಗಳನ್ನೂ ‘ಅಕ್ಕರ’, ‘ಚೌಪದಿ’, ‘ಗೀತಿಕೆ’, ‘ತ್ರಿವದಿ’, ಮೊದಲಾದ ಛಂದೋವಿಶೇಷಗಳು ಕನ್ನಡದಲ್ಲಿದ್ದವೆಂದು ‘ಕವಿರಾಜಮಾರ್ಗ’ ಹೇಳುತ್ತದೆ. ಕನ್ನಡ ನಾಡಿನ ಬಗ್ಗೆ, ಕನ್ನಡಿಗರ ಬಗ್ಗೆ ಹೀಗೊಂದು ನಿರೂಪಣೆ ಇದೆ:

 ‘‘ಕಾವೇರಿಯಿಂದಂ-ಆ-ಗೋದಾವರಿವರಮ್-ಇರ್ದ=-ನಾಡು-ಅದು-ಆ-ಕನ್ನಡದೊಳ್‌ಭಾವಿಸಿದ-ಜನಪದಂ;

(ಇದು)ವಸುಧಾ-ವಲಯ-ವಿಲೀನ-ವಿಶದ, ವಿಷಯ, ವಿಶೇಷಂ:ಇದರಲ್ಲಿ ಕಿಸುವೊಳಲು-ಕೊಪಣ-ಪುಲಿಗೆರೆ-

ಒಂಕುಂದ ಈ ಊರುಗಳ ನಡುವಣ ಪ್ರದೇಶವು ಕನ್ನಡದ ತಿರುಳು’’

ಇನ್ನು ಕನ್ನಡಿಗರಾದರೋ:

‘‘ಈನಾಡಿನವರು ಹದವರಿತು ಹೇಳಲು, ಹೇಳಿದುದನ್ನು ಅರಿತು ಲಾಲಿಸಿಕೊಳ್ಳಲು ಶಕ್ತರು;ನಿಜವಾಗಿ ಚದುರರು; ಕುರಿತು ಓದಿಕೊಳ್ಳದಿರುವವರೂ ಕಾವ್ಯಪ್ರಯೋಗ ಪರಿಣತಮತಿಗಳು; ಕುರಿತು ಓದಿಕೊಳ್ಳದ ಇಂಥವರಲ್ಲೂ ಎಲ್ಲರೂ ತಮ್ಮತಮ್ಮ ನುಡಿಗಳಲ್ಲಿ ಜಾಣರು, ಚಿಕ್ಕಮಕ್ಕಳೂ, ಮಹಾ ಮೂಕರೂ ಕೂಡಾ ವಿವೇಕದ ಮಾತುಗಳನ್ನಾಡಬಲ್ಲವರೇ; ಅಷ್ಟು ಜಾಣರಲ್ಲದವರೂ ಛಲವುಳ್ಳವರಾಗಿ, ಕೃತಿಯಲ್ಲಿ ಅವಗುಣ ಕಂಡಿತೆಂದರೆ ತಜ್ಞತೆಯಿಲ್ಲದಿದ್ದರೂ ತಜ್ಞರ ಹಾಗೆ ಅವಗುಣವನ್ನು ಹಿಡಿದು ದೂಷಿಸುತ್ತಾರೆ’’

-ಹೀಗೆ ಕನ್ನಡ ನಾಡುನುಡಿಗಳ ಬಗ್ಗೆ ಅಭಿಮಾನಪೂರ್ವಕವಾದ ವರ್ಣನೆಯುಳ್ಳ ‘ಕವಿರಾಜ ಮಾರ್ಗ’ದಲ್ಲಿ ಬರುವ,‘ಕಾವೇರಿಯಿಂದಾಮ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’ ಎನ್ನುವ ಮಾತುಗಳಲ್ಲಿನ ಕರ್ನಾಟಕದ ಭೌಗೋಳಿಕ ವಿಸ್ತಾರ, ಅದರೊಳಗಿನ ತಿರುಳ್ಗನ್ನಡದ ಸೀಮೆಗುರುತು ಮೊದಲಾದ ಸಂಗತಿಗಳು ಇನ್ನೆಲ್ಲಿಯೂ ಆ ಕಾಲದಲ್ಲಿ ದೊರೆಯವು ಎನ್ನುತ್ತಾರೆ ಕನ್ನಡ ಸಾಹಿತ್ಯ ಚರಿತ್ರೆಕಾರ ರಂ.ಶ್ರೀ. ಮುಗಳಿಯವರು.

ಜೊತೆಗೆ ಕನ್ನಡ ನಾಡವರ ಕಾವ್ಯಪ್ರಯೋಗ ಪರಿಣತಿ, ಸಹಜವಿವೇಕ, ವಿಮರ್ಶನ ಶಕ್ತಿ ಇವನ್ನು ವಿಶೇಷವಾಗಿ ಗುರುತಿಸಲಾಗಿದೆ. ‘ಕನ್ನಡಕ್ಕೆ ನಾಡವರ್ ಒವಜರ್’ಎಂದು ನಾಡವರ ನಾಡೋಜ ವೃತ್ತಿಪ್ರವೃತ್ತಿಗಳನ್ನೂ ಕವಿ ಎತ್ತಿಹೇಳಿದ್ದಾನೆ. ‘ಕವಿರಾಜ ಮಾರ್ಗ’ ಮೊದಲು ಪ್ರಕಟಗೊಂಡದ್ದು 1897ರಲ್ಲಿ. ಈಗ ನೂರಿಪ್ಪತ್ತು ವರ್ಷಗಳ ನಂತರವೂ ಅದು ಸುದ್ದಿಯಲ್ಲಿರುವುದಕ್ಕೆ ಮುಖ್ಯ ಕಾರಣ ಅದರ ಇಂಗ್ಲಿಷ್ ಭಾಷಾಂತರ. ಕನ್ನಡದ ಗಣ್ಯ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆಯವರು 2015ರಲ್ಲಿ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ ನೇಮಕಗೊಂಡಾಗ ಆಡಿದ ಒಂದು ಮಾತು ನೆನಪಾಗುತ್ತಿದೆ. ‘‘ಕನ್ನಡದ ಹೆಗ್ಗುರುತು ಎನ್ನಬಹುದಾದ ಮಹತ್ವದ ಕೃತಿಗಳನ್ನು ಅನ್ಯಭಾಷೆಗಳಿಗೆ ಭಾಷಾಂತರಿಸುವುದು, ಸಾಹಿತ್ಯದ ತೌಲನಿಕ ಅಧ್ಯಯನ ಮತ್ತು ಮಹಿಳಾ ಸಾಹಿತ್ಯದ ಅಧ್ಯಯನ ತಮ್ಮ ಆದ್ಯತೆ’’ಗಳೆಂದು ಬಿಳಿಮಲೆಯವರು ಆಗ ತಿಳಿಸಿದ್ದರು.

 ಬಿಳಿಮಲೆಯವರು ಆಡಿದ ಮಾತಿನಂತೆ ನಡೆದುಕೊಂಡಿದ್ದು, ಒಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ರಚಿತವಾಗಿರಬಹುದಾದ ಕನ್ನಡ ವಾಙ್ಮಯದ ಪ್ರಥಮ ಉಪಲಬ್ಧ ಗ್ರಂಥವಾದ ‘ಕವಿರಾಜಮಾರ್ಗ’ವನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿಸಿ ಪ್ರಕಟಿಸಿರುವುದು ಸ್ತುತ್ಯಾರ್ಹವಾದುದು. ಪ್ರೊ. ಆರ್.ವಿ.ಎಸ್.ಸುಂದರಂ ಮತ್ತು ಪ್ರೊ. ದೇವೆನ್ ಎಂ. ಪಟೇಲ್ ಇದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಅನುವಾದ ಕಾರ್ಯ ಕೈಗೆತ್ತಿಕೊಳ್ಳುವ ಮುನ್ನ ಪ್ರೊ. ಸುಂದರಂ ಮತ್ತು ಪ್ರೊ. ಪಟೇಲ್ ಕವಿರಾಜ ಮಾರ್ಗದ ಲಭ್ಯವಿರುವ ಆರು ಪಠ್ಯಗಳನ್ನು ಪರಾಮರ್ಶಿಸಿದ್ದಾರೆ. ಕವಿರಾಜ ಮಾರ್ಗ ಕೇವಲ ಕಾವ್ಯಕ್ಕೆ ಸಂಬಂಧಿಸಿದ ಕೃತಿಯಷ್ಟೇ ಅಲ್ಲ.

ವ್ಯಾಕರಣ, ಛಂದಸ್ಸು, ಛಂಧಶ್ಶಾಸ್ತ್ರ, ಇತಿಹಾಸ, ಭೂಗೋಳ, ಕನ್ನಡ ಭಾಷಿಕರ ಗುಣಸತ್ವಗಳು ಮೊದಲಾದವುಗಳೊಂದಿಗೆ ಅನುಸಂಧಾನ ನಡೆಸಿರುವ ಬಹುಆಯಾಮಗಳ ಕೃತಿ. ಇಂಥ ಕೃತಿಯ ಅನುವಾದ, ಲಭ್ಯವಿರುವ ಪಠ್ಯಗಳ ಅಧ್ಯಯನದಂಥ ಸಹನೆ, ನಿರ್ಣಯ ವಿವೇಕ ವಿವೇಚನೆ ಮತ್ತು ಪ್ರಗಲ್ಭ ಪಾಂಡಿತ್ಯವನ್ನು ಬೇಡುವಂಥ ಶ್ರಮದಾಯಕ ಕೆಲಸ. ಜೊತೆಗೆ ಇಂಥ ಕೃತಿಗಳ ಭಾಷಾಂತರ ಏಕವ್ಯಕ್ತಿ ಸಾಹಸವನ್ನು ಮೀರುವಂಥಾದ್ದು. ಪ್ರೊ. ಸುಂದರಂ ಅವರು ಹೇಳಿರುವಂತೆ, ಕೃತಿಯ ಅರ್ಥವಿನ್ಯಾಸಗಳಿಗೆ ಲೋಪಬಾರದ ರೀತಿಯಲ್ಲಿ ಅನುವಾದಿಸುವ ನಿಟ್ಟಿನಲ್ಲಿ ಸಂಸ್ಕೃತ ವಿದ್ವಾಂಸರಾದ ಪ್ರೊ. ದೇವನ್ ಪಟೇಲ್ ಅವರ ನೆರವು ಒದಗಿಬಂದಿರುವುದು ಅನುವಾದದ ಪರಿಪೂರ್ಣತೆಗೆ ಸಹಕಾರಿಯಾಗಿದೆ.

        ಇಂದು (ಸೆ.3) ಹೊಸದಿಲ್ಲಿಯಲ್ಲಿ ಲೋಕಾರ್ಪಣೆಗೊಳ್ಳಲಿರುವ ‘ಕವಿರಾಜಮಾರ್ಗ’ದ ಇಂಗ್ಲಿಷ್ ಅನುವಾದದಿಂದ ಅನ್ಯಭಾಷಿಕರಿಗೆ ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನದ ಹೆಬ್ಬಾಗಿಲು ತೆರೆದಂತಾಗಿದೆ. ಇಂಥದೊಂದು ಮಹತ್ವದ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿರುವ ಜೆಎನ್‌ಯು ಕನ್ನಡ ಪೀಠದ ಪುರುಷೋತ್ತಮ ಬಿಳಿಮಲೆ ಮತ್ತು ಅನುವಾದಕರಾದ ಪ್ರೊ.ಸುಂದರಂ ಮತ್ತು ಪ್ರೊ. ಪಟೇಲ್ ಕನ್ನಡಿಗರ ಕೃತಜ್ಞತಾಪೂರ್ವಕ ಅಭಿನಂದನೆಗೆ ಅರ್ಹರು.

ಹನ್ನೊಂದನೆಯ ಶತಮಾನದ ಇನ್ನೊಂದು ಮಹತ್ವದ ಕೃತಿ ‘ವಡ್ಡಾರಾಧನೆ’. ಹತ್ತೊಂಬತ್ತು ಕತೆಗಳನ್ನು ಹೇಳುವ, ಕಥನ ಗುಣವೇ ಪ್ರಮುಖ ಆಕರ್ಷಣೆಯಾದ ‘ವಡ್ಡಾರಾಧನೆ’ಯ ಕರ್ತೃ ಶಿವಕೊಟ್ಯಾಚಾರ್ಯ. ಆ ಕಾಲದ ಜನಜೀವನ, ಜೀವನ ಶೈಲಿ ಮತ್ತು ಕನ್ನಡ ಭಾಷೆಯ ಮೇಲೆ ಬೆಳಕು ಚೆಲ್ಲುವ ‘ವಡ್ಡಾರಾಧನೆ’ಯನ್ನು ಪ್ರೊ. ಸುಂದರಂ ಮತ್ತು ಖರಗಪುರದ ಐಐಟಿಯಲ್ಲಿ ಪ್ರೊಫೆಸರಾಗಿರುವ ಎಚ್.ಎಸ್. ಕಮಲೇಶ ಇಂಗ್ಲಿಷ್‌ಗೆ ಅನುವಾದಿಸುತ್ತಿದ್ದು ಜೆಎನ್‌ಯು ಕನ್ನಡ ಅಧ್ಯಯನ ಪೀಠವೇ ಅದನ್ನು ಪ್ರಕಟಿಸಲಿದೆ ಎನ್ನುತ್ತಾರೆ ಪುರುಷೋತ್ತಮ ಬಿಳಿಮಲೆ. ರನ್ನನ ‘ಸಾಹಸ ಭೀಮ ವಿಜಯ’ ಅಥವಾ ‘ಗದಾಯುದ್ಧ’ದ ಇಂಗ್ಲಿಷ್ ಅನುವಾದ ಕನ್ನಡ ಅಧ್ಯಯನ ಪೀಠದ ಮುಂದಿನ ಯೋಜನೆಯಾಗಿದೆ. ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ ಪುರುಷೋತ್ತಮ ಬಿಳಿಮಲೆಯವರು ಕೈಗೊಂಡಿರುವ ಈ ಮಹತ್ವಪೂರ್ಣ ಅನುವಾದ ಯೋಜನೆಗಳು ನಮ್ಮ ವಿಶ್ವವಿದ್ಯಾನಿಲಯಗಳಿಗೆ ಮಾದರಿಯಾಗಿವೆ ಎಂದರೆ ಉತ್ಪ್ರೇಕ್ಷೆಯಾಗದು.

share
ಜಿ.ಎನ್.ರಂಗನಾಥ ರಾವ್
ಜಿ.ಎನ್.ರಂಗನಾಥ ರಾವ್
Next Story
X