ಶಾರದಾಮ್ಮಾವ್ರಿಗೆ ಭಾರೀ ಜರತಾರಿ ಸೀರೆ ಕುಬಸದ ಕಣ ಮತ್ತು ತಮಗೆ ಒಂದು ಜೊತೆ ಶಲ್ಯ ಕಳುಹಿಸುತ್ತಿದ್ದೇನೆ
ಇತಿಹಾಸ-ವರ್ತಮಾನ ► ಟಿಪ್ಪು ಸುಲ್ತಾನನ ರಾಜನೀತಿ

1791-92ರಲ್ಲಿ ಮೂರನೆ ಮೈಸೂರು ಯುದ್ಧದ ವೇಳೆ ನಡೆದ ಘಟನೆಯಿದು.
ಮರಾಠ ಸೈನ್ಯವು ಶಿವಮೊಗ್ಗ ಜಿಲ್ಲೆಯ ಬಿದನೂರಿನ ಮೇಲೆ ದಾಳಿ ಮಾಡಿ, ಶೃಂಗೇರಿಯ ಮೇಲೂ ಏರಿ ಬಂದು 60ಲಕ್ಷ ರೂ.ಗಳಷ್ಟು ವಸ್ತುಗಳನ್ನು ಲೂಟಿಮಾಡಿ ಶಾರದಾಂಬೆಯ ವಿಗ್ರಹವನ್ನು ಕದಲಿಸಿದ್ದರು. ಅಂತಹ ಸಂದರ್ಭದಲ್ಲಿ ಶೃಂಗೇರಿ ಮಠಾಧೀಶರಿಗೆ ಟಿಪ್ಪುಸುಲ್ತಾನನು ಬರೆದ ಪತ್ರ. ಟಿಪ್ಪುಸುಲ್ತಾನನ ಸೇನೆಯ ಗೆಲುವಿಗೆ ಸಾಮ್ರಾಜ್ಯದ ಕಲ್ಯಾಣಕ್ಕಾಗಿ ಮಠದಲ್ಲಿ ಚಂಡಿ ಹವನ ಮಾಡಲು ಕೋರಿ ಟಿಪ್ಪು ಬರೆದಿದ್ದ ಪತ್ರವನ್ನು ಸರಳಗನ್ನಡದಲ್ಲಿ ನೀಡಲಾಗಿದೆ.
ಶ್ರೀಮಠದ ಪರಮಹಂಸ ಗೌರವಾನ್ವಿತ ಶೃಂಗೇರಿ ಶ್ರೀ ಸಚ್ಚಿದಾನಂದ ಸ್ವಾಮಿಗಳ ಸನ್ನಿಧಾನಕ್ಕೆ ನಿಮ್ಮ ಪತ್ರವನ್ನು ಸ್ವೀಕರಿಸಲಾಗಿ ವಿಷಯದ ಗಂಭೀರತೆಯು ಅರ್ಥವಾಯಿತು. ಮರಾಠ ರಾಜನ ಕಾಲಾಳುದಳವು ಬಂದು ಬ್ರಾಹ್ಮಣ ಮತ್ತಿತರ ಜನರನ್ನು ಹೊಡೆದು, ಶಾರದಾಮ್ಮಾವ್ರ ವಿಗ್ರಹವನ್ನು ತೆಗೆದಿದ್ದು ತಿಳಿದು ಬಂದಿದೆ.
ಜೊತೆಗೆ ಶೃಂಗೇರಿ ಮಠದ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಅದಲ್ಲದೆ ಮಠದ ಶಿಷ್ಯರು ಕಾರ್ಕಳದಲ್ಲಿ ಆಶ್ರಯ ಪಡೆದಿದ್ದಾರೆ.
ಶೃಂಗೇರಿ ಶಾರದಾಮ್ಮಾವ್ರ ವಿಗ್ರಹವು ಪ್ರಾಚೀನ ಕಾಲದ್ದಾಗಿದ್ದು ಅದನ್ನು ಮರು ಪ್ರತಿಷ್ಠಾಪಿಸಬೇಕಿದೆ. ಅದಕ್ಕೆ ಸರಕಾರದ ಬೆಂಬಲವೂ ಅಗತ್ಯ. ದೇವತಾ ವಿಗ್ರಹದಡಿ ಸಾಮೂಹಿಕ ಭೋಜನ ಏರ್ಪಡಿಸಿ ಮರುಪ್ರತಿಷ್ಠಾಪಿಸಬೇಕು.
ಅದಕ್ಕೆ ಬೇಕಾದ ಸಕಲ ಸೌಕರ್ಯವನ್ನು ನಾವು ಒದಗಿಸುತ್ತೇವೆೆ.
ಶ್ಲೋಕವೊಂದು ಹೇಳುವಂತೆ ಯಾರು ದುರಹಂಕಾರದಿಂದ ವರ್ತಿಸುತ್ತಾರೊ ಅವರು ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಾರೆ. ಅದಕ್ಕೆ ಈ ಹಲ್ಲೆ ಎಸಗಿರುವುದು ಹೊರತಲ್ಲ.
ಈ ಮುತ್ತಿಗೆಯ ಸುದ್ದಿ ತಿಳಿದ ತಕ್ಷಣವೇ ಸರಕಾರವು ಮಠಕ್ಕೆ ಆನೆ ಮತ್ತು ಅಹಮದ್ ಎಂಬ ಮಾವುತನನ್ನು ಕಳಿಸಲಾಗಿದೆ. ಪುರ ಪ್ರಮುಖರು 200 ರೂ.ಗಳ ನಗದು ಮತ್ತು 200 ರೂ.ಗಳನ್ನು ಭತ್ತಕೊಳ್ಳಲು ಹಾಗೂ ಪಲ್ಲಕ್ಕಿಯನ್ನು ನಿರ್ಮಿಸಿ ಶಾರದಾಮ್ಮವರ ಮರು ಪ್ರತಿಷ್ಠಾಪನೆಗೆ ಅಗತ್ಯ ಕೈಗೊಂಡು ವರದಿ ಕಳಿಸಲು ತಿಳಿಸಲಾಗಿದೆ.
ಶಾರದಾಮ್ಮವರಿಗೆ ಭಾರೀ ಜರತಾರಿ ಸೀರೆ ಮತ್ತು ಕುಬಸದ ಕಣ, ತಮಗೆ ಒಂದು ಜೊತೆ ಶಲ್ಯವನ್ನು ಕಳಿಸುತ್ತಿದ್ದೇವೆೆ. ಅವು ತಮಗೆ ತಲುಪಿದ್ದಕ್ಕೆ ಪತ್ರ ಬರೆಯಿರಿ. ಪುರ ಪ್ರಮುಖನಿಗೆ ಮಠದ ಸಮಸ್ಯೆಗಳನ್ನು ಪರಿಹರಿಸಲು ಆದೇಶಿಸಲಾಗಿದೆ. ಅವನನ್ನು ಸಂಪರ್ಕಿಸಿ.
-ದಿನಾಂಕ 26, ಸಮರಿಸಲ ಬಾಬರಾಬಧಿ, 1214ನೆ ವರ್ಷ, ಮುಹಮ್ಮದ್,
ವಿರೋಧಿಕೃತ ಸಂವತ್ಸರ ಆಷಾಢ ಬಹುಳ 12, (ಲಿಪಿಕಾರ ನರಸಯ್ಯ ಸಹಿ ನಟಿ ಮಲ್ಲಿಕ್.)








