ಮನೆಗೆ ನುಗ್ಗಿ ತಂಡದಿಂದ ಹಲ್ಲೆ, ಸೊತ್ತುಗಳಿಗೆ ಹಾನಿ: ದೂರು
ಮಂಗಳೂರು, ಸೆ. 3: ಸುಮಾರು 15 ಮಂದಿಯ ತಂಡವೊಂದು ಮನೆಗೆ ನುಗ್ಗಿ, ಮನೆಮಂದಿಗೆ ಹಲ್ಲೆ ನಡೆಸಿ ಸೊತ್ತುಗಳಿಗೆ ಹಾನಿ ಮಾಡಿದ ಘಟನೆ ಉಳ್ಳಾಲ ದರ್ಗಾ ಬಳಿಯ ಮನೆಯಲ್ಲಿ ನಡೆದಿದೆ.
ಸುಮಾರು 15 ಮಂದಿಯ ತಂಡವೊಂದು ಲಾಂಗು, ಮಚ್ಚುಗಳಿಂದ ಮನೆಯಲ್ಲಿದ್ದ ಮಾಲಕ ಖಾಸಿಮ್, ಆತನ ಪತ್ನಿ ಮೈಮುನಾ ಅವರ ಮಕ್ಕಳಾದ ಸೋಯಲ್, ಅಮಿನ್ ಮೇಲೆ ಹಲ್ಲೆ ನಡೆಸಿದ ಘಟನೆ ನಿನ್ನೆ ರಾತ್ರಿ 11:30 ರ ಸುಮಾರಿಗೆ ನಡೆದಿರುವುದಾಗಿ ದೂರಲಾಗಿದೆ.
ಖಾಸಿಮ್ ರ ಪುತ್ರ ಹಂಝ ಎಂಬವರನ್ನು ಹುಡುಕಿಕೊಂಡು ಬಂದ ತಂಡ, ಹಂಝ ಮನೆಯಲ್ಲಿ ಇಲ್ಲದ ಕಾರಣ ಮನೆಮಂದಿಗೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ದುಷ್ಕರ್ಮಿಗಳು ಮನೆಯಲ್ಲಿದ್ದ ಸೊತ್ತುಗಳನ್ನು ಹಾನಿ ಮಾಡಿರುವುದಲ್ಲದೆ, ಮನೆಯ ಕಿಟಕಿ, ಬಾಗಿಲುಗಳನ್ನು ಪುಡಿಗೈದಿರುವುದಾಗಿ ಮನೆಮಂದಿ ದೂರಿದ್ದಾರೆ. ಹಲ್ಲೆಯಿಂದ ಗಾಯಗೊಂಡವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story