ಫಲಿಮಾರಿನ ಆರ್ಟ್ ಗ್ಯಾಲರಿಗೆ ಭೇಟಿ ನೀಡಿದ ವಿದೇಶಿ ವಿದ್ಯಾರ್ಥಿಗಳು

ಪಡುಬಿದ್ರೆ, ಸೆ. 3: ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿ ಪಲಿಮಾರಿನ ಖ್ಯಾತ ಟೆರ್ರಾಕೋಟಾ ಕಲಾವಿದ ವೆಂಕಿ ಪಲಿಮಾರ್‌ರವರ ಪಲಿಮಾರಿನಲ್ಲಿರುವ ತಮ್ಮ ಚಿತ್ರಾಲಯ ಆರ್ಟ್ ಗ್ಯಾಲರಿಗೆ ಶನಿವಾರ ಇಂಗ್ಲೆಂಡ್‌ನ ಲ್ಯಾಂಕಶೈರ್ ಅಧ್ಯಯನ ವಿದ್ಯಾರ್ಥಿಗಳು ಭೇಟಿ ನೀಡಿದರು.
ಇಂಗ್ಲೆಂಡ್‌ನ ಲ್ಯಾಂಕೆಸ್ಟರ್ ವಿವಿಯ 24 ವಿದ್ಯಾಥಿಗಳು ಮೂರು ವಾರಗಳ ಅಧ್ಯಯನ ಪ್ರವಾಸಕ್ಕಾಗಿ ಮಣಿಪಾಲಕ್ಕೆ ಬಂದಿದ್ದಾರೆ. ಆಗಸ್ಟ್ 28 ರಂದು ಮಣಿಪಾಲಕ್ಕೆ ಬಂದಿರುವ ಅವರು ಸೆಪ್ಟೆಂಬರ್ 8 ರವರೆಗೆ ಸುತ್ತಮುತ್ತಲಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಭಾರತೀಯ ಸಂಸ್ಕೃತಿ, ಭರತನಾಟ್ಯ, ಶ್ರೀಕೃಷ್ಣ ಮಠ, ಪಾಜಕ, ಪುರಾತನ ಭಾರತೀಯ ಶಾಲೆಗಳು, ಜೈನ್ ದೇವಾಲಯ, ಅಕ್ಕಿ ಗಿರಣಿ, ಕುಂದಾಪುರದ ನಮ್ಮ ಭೂಮಿ, ನೀಲಾವರ ಗೋಶಾಲೆ, ಅ ಪ್ರದೇಶದಲ್ಲಿನ ಭತ್ತದ ಕೃಷಿ ಬಗ್ಗೆ ಮಾಹಿತಿ ಪಡೆದಿದ್ದು, ಶನಿವಾರ ಪಲಿಮಾರಿಗೆ ಆಗಮಿಸಿದರು. ವಿದ್ಯಾರ್ಥಿಗಳಾದ ಜಾರ್ಜಿಯಾ ಮತ್ತು ಡೇನಿಯಲ್ ನೇತೃತ್ವದ 24 ವಿದ್ಯಾರ್ಥಿಗಳಿಗೆ ವೆಂಕಿ ಪಲಿಮಾರ್‌ರವರು ತಮ್ಮ ಕೈಚಳಕದಿಂದ ಆವೆ ಮಣ್ಣಿನ ಕಲಾಕೃತಿ ರಚಿಸಿ ಹುರಿದುಂಬಿಸಿದರು. ಗ್ಯಾಲರಿಯ ಕ್ಲೇ ಮಾಡೆಲ್‌ಗಳನ್ನು ಆಸಕ್ತಿದಾಯಕವಾಗಿ ವೀಕ್ಷಿಸಿದರು. ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ಆವೆ ಮಣ್ಣು ನೀಡಿ ಕೈಚಳಕ ಪ್ರದರ್ಶಿಸಲು ಅನುವುಮಾಡಿಕೊಟ್ಟರು.
ಕ್ಲೇ ಮಾಡೆಲಿಂಗ್ ಕಾರ್ಯಾಗಾರ ನಡೆಸಿಕೊಟ್ಟ ವೆಂಕಿ ಪಲಿಮಾರ್ ಮಾತನಾಡಿ, ವಿದೇಶೀ ವಿದ್ಯಾರ್ಥಿಗಳು ತಮ್ಮ ಗ್ಯಾಲರಿಗೆ ಭೇಟಿ ನೀಡಿರುವುದು ತುಂಬಾ ಖುಷಿ ಎನಿಸಿದೆ. ತನ್ನ ವಿದ್ಯಾರ್ಥಿಗಳಾದ ಅಕ್ಷಯ್‌ರಾಜ್, ಲಾರೆನ್ ಪಿಂಟೋ ಹಾಗೂ ದುರ್ಗಾ ಪ್ರಸಾದ್‌ರವರಿಗೆ ಇನ್ನಷ್ಟು ಉತ್ತೇಜನ ದೊರಕಿದಂತಾಗಿದೆ. ವಿದ್ಯಾರ್ಥಿಗಳೆಲ್ಲೂ ಗ್ಯಾಲರಿ ನೋಡಿ ತುಂಬಾ ಸಂತೋಷಪಟ್ಟರು. ಅವರಲ್ಲಿ ಅನೇಕರಿಗೆ ಆಸಕ್ತಿಯೂ ಉಂಟಾಯಿತು ಎಂದರು.
ವಿದ್ಯಾರ್ಥಿನಿ ಜಾರ್ಜಿಯಾ ಮಾತನಾಡಿ, ಭಾರಕ್ಕೆ ಬರಲು ತುಂಬಾ ಹೆಮ್ಮೆ ಎನಿಸಿದೆ. ವಿವಿಧ ಸಂಸ್ಕೃತಿಯ ಈ ನಾಡಿನ ಎಲ್ಲವನ್ನೂ ಕಲಿಯಬೇಕೆಂಬ ಉತ್ಸಾಹ ಉಂಟಾಗಿದೆ. ಕಳೆದ ಐದು ದಿನಗಳಿಂದ ಕರಾವಳಿಯ ಹಲವೆಡೆ ತಿರುಗಾಡಿ ಬೇಕಾದಷ್ಟನ್ನು ಕಲಿತಿದ್ದೇವೆ. ಸಂಸ್ಕೃತ ಭಾಷೆಯ ಬಗ್ಗೆ ತುಂಬಾ ಒಲವುಂಟಾಗಿದೆ ಎಂದರು.
ಟೀಮ್ ಮುಖ್ಯಸ್ಥ ಡೇನಿಯಲ್, ಕಲರ್‌ಫುಲ್ ಭಾರತದ ಬಗ್ಗೆ ಆಸಕ್ತಿಯುಂಟಾಗಿದೆ. ಇಲ್ಲಿನ ಜನರು ತುಂಬಾ ಸ್ನೇಹಪರರು. ಜೀವನದ ಅತ್ಯುತ್ತಮ ಭೇಟಿ ಇದಾಗಿದೆ. ಇನ್ನೊಮ್ಮೆ ಭಾರತಕ್ಕೆ ಬರಲು ಇಷ್ಟಪಡುತ್ತೇನೆ. ಪಲಿಮಾರಿನಲ್ಲಿ ನೋಡಿದ ಕ್ಲೇ ಮಾಡೆಲಿಂಗ್ ಬಗ್ಗೆ ಹೆಚ್ಚು ಆಸಕ್ತಿಯುಂಟಾಗಿದೆ ಎಂದರು.
ಮಣಿಪಾಲ್ ವಿವಿಯ ಅಕಾಡಮಿ ಕೋರ್ಡಿನೇಟರ್ ಪೂಜಾ ನಾಡಿಗೀರ್ ಮಾತನಾಡಿ, ಪ್ರತಿ ವರ್ಷ ನಾವು ಪರಸ್ಪರ ಸಾಂಸ್ಕೃತಿಕ ವಿನಿಮಯ ಹಮ್ಮಿಕೊಳ್ಳುತ್ತಿದ್ದೇವೆ. ಈ ಬಾರಿಯ ವಿದ್ಯಾರ್ಥಿಗಳಿಗೆ ವೆಂಕಿ ಪಲಿಮಾರ್‌ರವರ ಆರ್ಟ್ ಗ್ಯಾಲರಿಗೆ ಕರೆದುಕೊಂಡು ಬಂದಿದ್ದು, ಅವರಿಗೆ ವಿಶೇಷ ಅನುಭವವಾಗಿದೆ. ಇಲ್ಲಿ 15 ದಿನಗಳ ಕಾಲ ಇಲ್ಲಿನ ಸಂಸ್ಕೃತಿ ಬಗ್ಗೆ ಅವರಿಗೆ ತಿಳಿಯಪಡಿಸಲಿದ್ದು, ಬಳಿಕ ಗೋವಾಕ್ಕೆ ತೆರಳುತ್ತಾರೆ. ಅಲ್ಲಿಂದ ಅವರು ಜೈಪುರಕ್ಕೆ ತೆರಳಿ ಸಂಸ್ಕೃತಿ ವಿನಿಮಯ ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮ ನಿರ್ದೇಶಕ ಮಣಿಪಾಲ ಎಮ್‌ಐಟಿ ಅಸಿಸ್ಟೆಂಟ್ ಪ್ರೊಫೆಸರ್ ಪ್ರವೀಣ್ ಶೆಟ್ಟಿ ನಿರ್ದೇಶನದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಬಲರಾಮ ಭಟ್, ಮಣಿಪಾಲ ವಿವಿ ಪ್ರೆಸ್ ಚೀಫ್ ಎಕ್ಸಿಕ್ಯೂಟಿವ್ ರೇವತಿ ನಾಡಿಗೀರ್, ಗುರುಪ್ರಸಾದ್ ರಾವ್, ಜ್ಯೋತಿ ಪಿಂಟೋ, ಪಲಿಮಾರು ಗ್ರಾಪಂ ಸದಸ್ಯೆ ಗಾಯತ್ರಿ ಪ್ರಭು ಮತ್ತಿತರರು ಉಪಸ್ಥಿತರಿದ್ದರು.







