ಅವರಾಲುಮಟ್ಟು: 196 ವರ್ಷಗಳ ಶಾಲೆ ಸಿಬಿಎಸ್‌ಸಿ ಶಾಲೆಯಾಗಿ ಪರಿವರ್ತನೆಗೆ ಚಿಂತನೆ
ಪಡುಬಿದ್ರೆ, ಸೆ. 3: 196 ವರ್ಷಗಳ ಇತಿಹಾಸವಿರುವ ಪಲಿಮಾರು ಅವರಾಲುಮಟ್ಟು ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯನ್ನು ಸಿಬಿಎಸ್‌ಸಿ ಶಾಲೆಯನ್ನಾಗಿ ಮುನ್ನಡೆಸಲು ಊರವರು ಮುಂದಾಗಿದ್ದಾರೆ.
ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡುಮೆಯಾಗುತ್ತಿರುವ ಹಿನ್ನೆಯಲ್ಲಿ ಶಾಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಶುಕ್ರವಾರ ಶಾಲಾ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಸಿದರು.
ಸಭೆಯ ನಿರ್ಧಾರದಂತೆ ಈಗಾಗಲೇ ಶಾಲೆಯ ಒಂದರಿಂದ ಏಳನೇ ತರಗತಿವರೆಗೆ 17 ವಿದ್ಯಾರ್ಥಿಗಳಿದ್ದು, ಮುಂದಿನ ದಿನಗಳಲ್ಲಿ ಶಾಲೆ ಉಳಿಯುವ ಸಾಧ್ಯತೆ ಕಡಿಮೆಯಾಗಲಿದೆ. ತಕ್ಷಣದಿಂದ ಊರವರು, ಹಳೇ ವಿದ್ಯಾರ್ಥಿಗಳು ಒಗ್ಗೂಡಿ ಶಾಲೆಯನ್ನು ಉಳಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರಾಲು ಕಂಕಣಗುತ್ತು ಯಜಮಾನ ಕೃಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ 20 ಜನ ಸದಸ್ಯರ ಟ್ರಸ್ಟ್ ಆರಂಭಿಸಲು ಸಭೆ ನಿರ್ಧರಿಸಿತು.
ಸಿಬಿಎಸ್‌ಸಿ ಶಾಲೆ ಆರಂಭಿಸಲು ಕನಿಷ್ಠ ಎರಡೆಕರೆ ಜಾಗದ ಅವಶ್ಯಕತೆ ಇದ್ದು, ಈಗಿರುವ ಶಾಲಾ ಆಸುಪಾಸಿನಲ್ಲಿ ಎರಡೆಕರೆ ಜಾಗ ಪೆಯಲು ಶುಕ್ರವಾರವೇ ಕಾರ್ಯಪ್ರವರ್ತರಾಗಿದ್ದಾರೆ. ಈಗಾಗಲೇ ಕೆಲವು ದಾನಿಗಳು ಜಾಗ ನೀಡಲು ಸಿದ್ಧರಿದ್ದು, ಉಳಿದ ಜಾಗದ ಬಗ್ಗೆ ಸ್ಪಷ್ಟ ಮಾಹಿತಿ ಸಂಗ್ರಹಿಸಲು ಸಭೆ ನಿರ್ಧರಿಸಿತು.
ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಸರ್ಕಾರವು ಆಂಗ್ಲ ಮಾಧ್ಯಮ ಶಾಲೆ ನಡೆಸಲು ಅಸಾಧ್ಯ. ನೇರ ಬೆಂಬಲ ನೀಡಲೂ ಸಾಧ್ಯವಿಲ್ಲ. ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಶಾಲೆಗಳ ಮಾಧ್ಯಮವು ವಿದ್ಯಾರ್ಥಿಗಳ ಇಚ್ಚೆಗೆ ಸೇರಿದ್ದು. ಮಕ್ಕಳ ಸಂಖ್ಯೆ ಕಡಿಮೆಯಾದಲ್ಲಿ ಶಾಲೆಯನ್ನು ಮುಚ್ಚಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಬೇಕು. ಅದೇ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯಾಗಿಸಲು ಅಸಾಧ್ಯ. ಟ್ರಸ್ಟ್ ಆರಂಭಿಸಿ ಆಂಗ್ಲ ಮಾದ್ಯಮ ಶಾಲೆಯನ್ನು ಆರಂಭಿಸಬಹುದು. ಇಲ್ಲಿನ ಪರಿಸರ ಉತ್ತಮ ಶಿಕ್ಷಣಕ್ಕೆ ಹೇಳಿ ಮಾಡಿಸಿದಂತಿದೆ. ಅತ್ಯತ್ತಮ ಶಿಕ್ಷಣ ದೊರೆತಲ್ಲಿ ಮಕ್ಕಳ ಕೊರತೆಯಾಗದು ಎಂದರು.
ಇತ್ತೀಚಿನ ದಿನಗಳಲ್ಲಿ ನಾಯಿಕೊಡೆಗಳಂತೆ ಆಂಗ್ಲ ಮಾಧ್ಯಮ ಶಾಲೆಗಳು ಆರಂಭಗೊಂಡಿದ್ದು, ಹಣ ಮಾಡುವುದೊಂದೇ ಕಾಯಕವಾಗಿದೆ. ಆರೀತಿ ಆಗಕೂಡದು. ಉನ್ನತ ಇತಿಹಾಸ, ಉತ್ತಮ ಪರಿಸರ, ಗ್ರಾಮಸ್ಥರ ನಿಸ್ವಾರ್ಥ ಮನೋಭಾವ, ಅನಿವಾಸಿಗಳ ಹುಟ್ಟೂರಿನ ವ್ಯಾಮೋಹ ಹಾಗೂ ಎಲ್ಲಾ ಮೂಲಭೂತ ಸೌಕರ್ಯ ನೀಡಿದಲ್ಲಿ ಉತ್ತಮ ಶಿಕ್ಷಣ ಸಂಸ್ಥೆ ನಡೆಸಲು ಸಾಧ್ಯ ಎಂದವರು ಹೇಳಿದರು.
ಸಭೆಯನ್ನು ಪಡುಬಿದ್ರೆ ಬೀಡು ಅರಸರಾದ ರತ್ನಾಕರರಾಜ್ ಅರಸು ದೀ ಉದ್ಘಾಟಿಸಿದರು, ಕಿನ್ಯಕ್ಕ ಬಲ್ಲಾಳ್, ಮುಂಬೈಯ ಲಕ್ಷಣ ಕೆ.ಪ್ರಭು ಅವರಾಲುಮಟ್ಟು, ಡಾ. ಮನೋರಮಾ, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ ಕೆ. ,ಊರಿನ ಹಿರಿಯರಾದ ಎಮ್.ಅಬ್ಬಾಸ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ಕತ್ರಾಡಿ, ಶಾರ್ಲೆಟ್ ಫುರ್ಟಾಡೋ ಮತ್ತಿತರರು ಉಪಸ್ಥಿತರಿದ್ದರು.
ಜಗನ್ನಾಥ ಶೆಟ್ಟಿ ಪ್ರಸ್ತಾವಿಸಿದರು. ರೋಹಿತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.







