Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಗಡಿನಾಡಿನ ಕನ್ನಡ ದೀಪ ‘ರಸಿಕರಂಗ’...

ಗಡಿನಾಡಿನ ಕನ್ನಡ ದೀಪ ‘ರಸಿಕರಂಗ’ ರಂ.ಶ್ರೀ. ಮುಗಳಿ

ಮಿರ್ಜಿ ಅಣ್ಣಾರಾಯಮಿರ್ಜಿ ಅಣ್ಣಾರಾಯ3 Sept 2017 4:25 PM IST
share
ಗಡಿನಾಡಿನ ಕನ್ನಡ ದೀಪ ‘ರಸಿಕರಂಗ’ ರಂ.ಶ್ರೀ. ಮುಗಳಿ

ಶ್ರೀ ಮಿರ್ಜಿ ಅಣ್ಣಾರಾಯರು 1963 ರಲ್ಲಿ ಬರೆದ ಲೇಖನ. ಕನ್ನಡದ ಹೆಸರಾಂತ ವಿದ್ವಾಂಸರಾದ ರಂ.ಶ್ರೀ. ಮುಗಳಿಯವರ ವ್ಯಕ್ತಿತ್ವ, ಕನ್ನಡದ ಬಗೆಗಿನ ಪ್ರೀತಿ ಹಾಗೂ ಕಾರ್ಯತತ್ಪರತೆಯನ್ನು ಮಿರ್ಜಿ ಅಣ್ಣಾರಾಯರ ಈ ಬರಹವು ವಿಶಿಷ್ಟ ಸೊಗಡಿನಲ್ಲಿ ಬಿಂಬಿಸುತ್ತದೆ.

ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದಿನ ಸಂಗತಿ. ಅದೇ ಆಗ ನಾನು ಕನ್ನಡ ಶಾಲೆಗಳಲ್ಲಿ ಉಪಾಧ್ಯಾಯ ವೃತ್ತಿಗೆ ಸೇರಿದ್ದೆನು. ಅದೊಂದು ದೊಡ್ಡ ಹಳ್ಳಿ. ಕನ್ನಡ ನಾಡಿನ ಗಡಿಯಲ್ಲಿರುವ ಊರು. ಊರ ಇನಾಮದಾರರು ಮರಾಠಿಗಳು. ಊರಲ್ಲಿಯ ಕೆಲ ಪ್ರಮುಖರ ಸಂಬಂಧ ಮಹಾರಾಷ್ಟ್ರದ ಪುಣೆ-ಮುಂಬೈ ನಗರಗಳೊಡನೆ. ತಂಬಾಕು-ಬೆಲ್ಲ-ಮೆಣಸಿನಕಾಯಿಗಳ ವ್ಯಾಪಾರ-ವ್ಯವಹಾರಗಳೆಲ್ಲ ನೆರೆಯ ಮಹಾರಾಷ್ಟ್ರದ ಪಟ್ಟಣಗಳ ಕೂಡ. ಹೀಗಾಗಿ ಅಚ್ಚ ಕನ್ನಡ ಊರಾದ ಅಲ್ಲಿ ಮರಾಠಿ ಶಾಲೆಯೂ ಒಂದು. ಅದು ಕನ್ನಡ ಶಾಲೆಗಿಂತ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿ ಮೊೆಯುತ್ತಲಿತ್ತು. ಕನ್ನಡ ಶಾಲೆಗೆ ಮಕ್ಕಳನ್ನು ತರಬೇಕಾದರೆ ಮನೆ ಮನೆಗೂ ಶಾಲಾ ಗುರುಗಳು ಹೋಗಿ ವಿನಂತಿ ಮಾಡಿಕೊಂಡು ಕರೆದು ತರಬೇಕಾಗುತ್ತಿತ್ತು. ಪಾಲಕರ ಕೃಪೆಯಿಂದ ಕನ್ನಡ ಶಾಲೆಗೆ ಕನ್ನಡ ತಾಯಿಯು ಮಕ್ಕಳು ಒದಗಬೇಕು; ಇಲ್ಲದಿದ್ದರೆ ಇಲ್ಲ.

ಕನ್ನಡನಾಡಿನಲ್ಲಿ ಹುಟ್ಟಿ, ಕನ್ನಡದ ನಾಲ್ಕು ಪುಸ್ತಕಗಳನ್ನು ಓದಿ, ಕನ್ನಡ ಶಾಲೆಯ ಶಿಕ್ಷಕನಾದ ನನಗೆ ಈ ಪರಿಸ್ಥಿತಿಯು ಕೆಣಕುವಂತಾಯಿತು. ಕನ್ನಡದ ಬಗ್ಗೆಯೂ ನಾವು ಅಭಿಮಾನ ತಾಳುವುದಿದೆ- ಎಂಬ ಅರಿವನ್ನು ಮೂಡಿಸಿತು. ಆದರೆ ಅಲ್ಲಿ ಅಭಿಮಾನಿಯಾಗಿ ಕನ್ನಡದ ಪರವಾಗಿ ಮಾತನಾಡಿದರೆ ಕನ್ನಡಕ್ಕೆ ಉಳಿಗಾಲವಿರಲಿಲ್ಲ. ಮಾತನಾಡುವವರಿಗೂ ಸ್ಥಾನವಿರಲಿಲ್ಲ. ‘ಸಂಬಳಕ್ಕಾಗಿ ಶಿಕ್ಷಕ ವೃತ್ತಿಗೆ ಸೇರಿದ ನಮಗೆ ಈ ಕನ್ನಡ-ಮರಾಠಿ ವಾದಗಳ ಗೊಡವೆ ಏಕೆ ?’- ಎನ್ನುವ ಸಹೋದ್ಯೋಗಿಗಳು!

ದಿನಗಳು ಉರುಳತೊಡಗಿದುವು. ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಕನ್ನಡ ಪತ್ರಿಕೆಗಳಿಗೆ ಏನಾದರೂ ಬರೆಯಬೇಕೆಂಬ ಹಂಬಲ ಬೇರೆ. ಹೀಗಾಗಿ, ಆಗ ಧಾರವಾಡದಲ್ಲಿ ಪ್ರಕಟವಾಗುತ್ತಿದ್ದ ‘‘ಜೀವನ’’ ಪತ್ರಿಕೆಗೆ ಲೇಖನವನ್ನು ಬರೆದು ಕಳುಹಿಸಿದ್ದೆ; ಆ ಲೇಖನ ಸ್ವೀಕೃತಿಯ ಬಗ್ಗೆ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಿಂದ ಉತ್ತರದ ಕಾಗದ ಬಂತು. ಆ ಕಾಗದವನ್ನು ಅಂಚೆಯಾಳು ಶಾಲೆಯಲ್ಲಿ ತಂದು ಕೊಟ್ಟಾಗ ಅದನ್ನು ನೋಡಲು ಶಾಲೆಯ ಎಲ್ಲ ಶಿಕ್ಷಕರೂ ಸೇರಿದರು. ಮುಖ್ಯಾಧ್ಯಾಪಕರೊಡನೆ ಎಲೆ, ಅಡಿಕೆ ತಿನ್ನಲೆಂದು ಶಾಲೆಗೆ ಬಂದ ಊರ ಪ್ರಮುಖರೂ ಒಂದಿಬ್ಬರು ಬೆರಗು-ಬೆಚ್ಚರಗಳಿಂದ ಅದನ್ನು ನೋಡಿದರು.

ಶ್ರೀರಂಗನಾಥ ಮುಗಳಿಯವರು ಈ ಸೀಮೆಯಲ್ಲಿ ಇರುವುದರಿಂದ ಕನ್ನಡದ ಅನೇಕ ಮುಖಂಡರೂ ಸಾಹಿತಿಗಳೂ ಅಧ್ಯಾತ್ಮ ಜೀವಿಗಳೂ ಇಲ್ಲೆಲ್ಲ ಬಂದು ಹೋಗಿದ್ದಾರೆ; ಬರುತ್ತಲೂ ಇದ್ದಾರೆ. ಅವರ ಉಪನ್ಯಾಸಗಳಿಂದ ಸಂಸ್ಕೃತಿಯು ವಿಕಾಸಗೊಂಡಿದೆ. ಕನ್ನಡದ ಆತ್ಮ ತೇಜವು ನೆರೆ ನಾಗರಿಕರ ಮನವನ್ನು ಬೆಳಗಿದೆ. ಇದರ ಜೊತೆಯಲ್ಲಿಯೇ ‘ಅಂತರ್ ಭಾರತೀ’ ಸಂಸ್ಥೆಯ ಮುಖಾಂತರ ಡಾ. ಮುಗಳಿಯವರು ಕನ್ನಡ ಸಾಹಿತ್ಯ ರಸದೂಟವನ್ನು ಮರಾಠಿಗರಿಗೂ ಮರಾಠಿ ಭಾಷೆಯಲ್ಲಿಯೇ ಉಣಬಡಿಸಿದ್ದಾರೆ.

‘‘ಪ್ರೊಫೆಸರ ಮುಗಳಿಯವರ ಕಾರ್ಡು?’’

ಎಂದರು ಇನ್ನೊಬ್ಬ ಹಿರಿಯರು.

ಆ ಓಲೆಯ ಓರಣ ನನ್ನ ಮನವನ್ನು ಸೆಳೆದಿತ್ತು. ಅದರಲ್ಲಿಯ ಭಾವ ಹೃದಯವನ್ನು ಅರಳಿಸಿತು. ‘‘ಎಲಾ! ಇವರು ಇಲ್ಲೇ ಸಾಂಗ್ಲಿಯಲ್ಲಿಯೇ ಇದ್ದಾರಲ್ಲ!’’ ಎಂಬ ಆಶ್ಚರ್ಯವು ಇನ್ನಷ್ಟು ಧೈರ್ಯವನ್ನು ತುಂಬಿತು. ಆದರೆ ಈ ಕಾಗದದ ಆಗಮನವೇ ಒಂದು ಪವಾಡದಂತಾಯಿತಲ್ಲ. ಈ ಜನರಿಗೆ! ಇದೇನು? ಎಂದು ನನ್ನಲ್ಲಿಯೇ ನಾನು ವಿಚಾರಕ್ಕೆ ಒಳಗಾದೆ.

ಈ ಗಡಿನಾಡಿನ ಕನ್ನಡ ಭಾಷೆಗೆ ಮುಗಳಿಯವರೊಬ್ಬರು ಪ್ರಾಣಜ್ಯೋತಿ ಎಂಬ ಅರಿವು ಆ ಊರ ಪ್ರಮುಖರಿಗೆ ಇತ್ತು. ಆ ಪತ್ರದಿಂದಾಗಿ ಅಂದಿನಿಂದ ನನ್ನನ್ನು ಅವರು ಕಾಣುವ ದೃಷ್ಟಿಯಲ್ಲಿ ಒಂದು ವಿಶೇಷತೆಯು ಉಂಟಾಯಿತು!

 ಇಷ್ಟರಲ್ಲಿ ನಮ್ಮ ಕನ್ನಡ ಶಾಲೆಗೆ ಅರವತ್ತು ವರ್ಷಗಳು ಆದವೆಂದು, ಅದರ ವಜ್ರಮೋತ್ಸವದ ಕಲ್ಪನೆಯೊಂದು ನಮ್ಮಲ್ಲಿ ಮೂಡಿತು. ಆ ಉತ್ಸವದ ಸಿದ್ಧತೆಗೆ ತೊಡಗಿದೆವು. ಆಗ ಆ ಸಮಾರಂಭಕ್ಕೆ ಮುಖ್ಯ ಅತಿಥಿಗಳೆಂದು ಯಾರನ್ನು ಕರೆಯಬೇಕೆಂಬ ಪ್ರಶ್ನೆಯೊಂದು ಎದ್ದಿತು. ಆಗ ವಿಲಿಂಗ್ಡನ್ ಕಾಲೇಜಿನ ಪ್ರಿನ್ಸಿಪಾಲ್ ಆಗಿರುವ ಶ್ರೀಮಾನ್ ವಿ.ಕೃ. ಗೋಕಾಕ ಹಾಗೂ ಪ್ರಾಧ್ಯಾಪಕ ಶ್ರೀ ರಂಗನಾಥ ಮುಗಳಿ ಇವರನ್ನು ಕರೆಯಿಸುವ ನಿರ್ಧಾರವಾಯಿತು.

ಇದೇನೋ ಕೆಲವು ತರುಣ ವಿದ್ಯಾರ್ಥಿಗಳ ನಿರ್ಧಾರ ಮಾತ್ರ ಆಗಿತ್ತು. ಕನ್ನಡ, ಕನ್ನಡ ಎಂದು ಕೂಗುವ ಒಂದಿಬ್ಬರು ಕಾಲೇಜ ವಿದ್ಯಾರ್ಥಿಗಳೂ ಬಿಡುವಿನಲ್ಲಿ ತಮ್ಮ ಹಳ್ಳಿಗೆ ಬಂದಾಗ, ಏನಾದರೊಂದು ಕಾರ್ಯಕ್ರಮ ಮಾಡಬೇಕೆಂದು ಹಂಬಲಿಸುವವರ ಇಚ್ಛೆಯು ಇದಾಗಿತ್ತು.

ಊರೊಳಗಿನ ಮರಾಠಿ ಪ್ರೇಮಿಗಳಿಗೆ ಗೋಕಾಕ- ಮುಗಳಿಯವರು ಬರುವುದೇನೊ ಬೇಕಾಗಿರಲಿಲ್ಲ. ಉಳಿದ ಹಿರಿಯರು ‘ಈ ಹುಡುಗರ ಕರೆಗೆ ಅಂಥ ದೊಡ್ಡ ಮನುಷ್ಯರು ಹೇಗೆ ಓಗೊಟ್ಟಾರು? ಸುಮ್ಮನೆ ಏನಾದರೊಂದು ಗಾಳಿಗೋಪುರ ಕಟ್ಟುವುದಾಯಿತು!’ ಎಂದಂದುಕೊಂಡಿದ್ದರು.

ಉತ್ಸವದ ಸಿದ್ಧತೆಯೆಲ್ಲ ಆಯಿತು. ಅತಿಥಿಗಳಿಗೆ ಆಮಂತ್ರಣ ಕೊಡಲು ಪುಣೆಯ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಯೊಬ್ಬನನ್ನು ಮುಂದೆ ಮಾಡಿಕೊಂಡು ನಾನು ಸಾಂಗ್ಲಿಗೆ ಹೋದೆನು. ಇಬ್ಬರಿಗೂ ಗೋಕಾಕ ಮುಗಳಿಯವರ ಮುಖ ಪರಿಚಯವೂ ಇರಲಿಲ್ಲ. ವಿಶ್ರಾಮಭಾಗದ ಎದುರಿನಲ್ಲಿ ಬಸ್ಸಿನಿಂದ ಇಳಿದು, ಪ್ರಿನ್ಸಿಪಾಲರ ಬಂಗಲೆಗೆ ಹೋದೆವು. ಮಧ್ಯಾಹ್ನದ ಎರಡು ಗಂಟೆಯಾಗಿತ್ತು. ಬೇಸಿಗೆಯ ಕಾಲ. ಮುಖದ ಮೇಲೆ ದಾರಿಯ ಧೂಳು. ಪ್ರಿನ್ಸಿಪಾಲ್ ಗೋಕಾಕರನ್ನು ಕಂಡೆವು. ನಮ್ಮನ್ನು ಆದರದಿಂದಲೇ ಬರಮಾಡಿಕೊಂಡರು. ಆದರೆ

‘‘ನನಗೆ ಈಗ ಪೇಪರ್ ತಪಾಸಿಸುವ ಕೆಲಸ. ಒಂದು ಘಳಿಗೆಯೂ ಸಮಯವಿಲ್ಲ. ನನಗೆ ಬರಲಿಕ್ಕೆ ಆಗುವುದಿಲ್ಲ’’ ಎಂದು ತಮ್ಮ ಹಾರ್ದಿಕ ಅನುತಾಪವನ್ನು ವ್ಯಕ್ತ ಮಾಡಿದರು.

ನಮಗಂತೂ ನಿರಾಶೆಯೇ ಆಯಿತು; ಆದರೂ ಕೇಳಿದೆವು.

‘‘ಪ್ರೊಫೆಸರ್ ಮುಗಳಿಯವರು ಎಲ್ಲಿರುತ್ತಾರೆ?’’

ನಮ್ಮ ಪ್ರಶ್ನೆಯ ಅರ್ಥ ಊಹಿಸಿದವರು. ತಕ್ಷಣ ಉತ್ತರಿಸಿದರು. ‘‘ಅವರಿಗೂ ಈಗ ಬರಲಿಕ್ಕೆ ಸಾಧ್ಯವಿಲ್ಲ. ಅವರ ಮನೆಯಲ್ಲಿ ತೊಂದರೆ. ವಿಶ್ರಾಮಭಾಗ ನಿಲ್ದಾಣದ ಆಚೆಗಿನ ಬಂಗಲೆಯಲ್ಲಿ ಇದ್ದಾರೆ’’ ಎಂದು ನುಡಿದರು.

ಹೊರಗೆ ಬಂದು ನಮ್ಮನ್ನು ಬೀಳ್ಕೊಡುವಾಗ ಪ್ರಿನ್ಸಿಪಾಲರು ಪ್ರೊಫೆಸರ ಮುಗಳಿಯವರ ಮನೆಯನ್ನು ಕೈಮಾಡಿ ತೋರಿಸಿದರು.

ನಿರಾಶೆಯಿಂದಲೇ ನಾವು ಹೋಗಿ, ಮುಗಳಿಯವರ ಬಾಗಿಲದ ಕರೆ ಗಂಟೆಯನ್ನು ಒತ್ತಿದೆವು. ಕೂಡಲೆ ಬಾಗಿಲು ತೆರೆಯಿತು. ತೆಳ್ಳಗಿನ ಮೈಯ, ಎತ್ತರದ ವ್ಯಕ್ತಿಯೊಂದು, ಬಾಗಿಲ ಒಳಬದಿಗೆ ನಿಂತು, ನಮ್ಮನ್ನು ನೋಡಿ:

‘‘ನಿಮಗೆ ಯಾರು ಬೇಕಾಗಿದ್ದರು?’’ ಎಂದು ಕೇಳಿದರು.

‘‘ನಮಗೆ ರಂ ಶ್ರೀ. ಮುಗಳಿಯವರನ್ನು ಕಾಣಬೇಕಾಗಿತ್ತು’’ ಎಂದೆವು ನಾವು.

ಒಳಗಿನಿಂದ ಬಾಗಿಲು ತೆರೆದ ವ್ಯಕ್ತಿಯೇ ಮುಗುಳು ನಗೆಯಿಂದ ‘‘ಬನ್ನಿರಿ!’’ ಎಂದು ಸ್ವಾಗತಿಸಿದರು. ಕೂಡಲಿಕ್ಕೆ ಹೇಳಿದರು. ಅವರೂ ನಮ್ಮ ಎದುರಿಗೆ ಕುರ್ಚಿಯೊಂದನ್ನು ಎಳೆದುಕೊಂಡು ಕುಳಿತರು. ಅವರೇ ಮುಗಳಿಯವರೆಂಬ ಕಲ್ಪನೆಯು ಆಗ ನಮಗೆ ಆಯಿತು.

ಕೆಂಪು ವರ್ಣ, ತುಂಬ ಮುದ್ದು ಮುಖ, ಮುಗುಳು ನಗೆ, ಕಪ್ಪು ತಲೆಗೂದಲು, ಓರಣದಿಂದ ಬಾಚಿದ ಕ್ರಾಪು, ತೀಕ್ಷ್ಣ ದೃಷ್ಟಿ, ಮುಗಳಿಯವರ ವ್ಯಕ್ತಿತ್ವವು ಆ ಮೊದಲ ದರ್ಶನದಲ್ಲಿಯೇ ಅಚ್ಚೊತ್ತಿದಂತೆ ನಮ್ಮ ಹೃದಯದಲ್ಲಿ ಮೂಡಿ ನಿಂತಿತು.

ಆಗ ಅವರಿಗೆ ನಮ್ಮ ಹತ್ತಿರ ಹೆಚ್ಚಿಗೆ ಕೂಡಲಿಕ್ಕೆ ಅವಕಾಶವಿರಲಿಲ್ಲ. ಅವರ ಸೌಭಾಗ್ಯವತಿಯವರ ಹೊಟ್ಟೆಯ ಆಪರೇಶನ್ ಆಗಿತ್ತು. ಅವರ ಹಾಸಿಗೆಯ ಹತ್ತಿರ ಆರೈಕೆಗೆಂದು ಹಗಲಿರುಳು ಯಾರಾದರೂ ಇರಬೇಕಾಗುತ್ತಿತ್ತು. ಆಪ್ತೇಷ್ಟರನ್ನುಳಿದು ದೂರದ ಈ ಮಹಾರಾಷ್ಟ್ರದಲ್ಲಿ ಕನ್ನಡದ ಕೆಲಸಕ್ಕೆಂದು ಬಂದು ನೆಲೆಸಿದವರಾಗಿದ್ದರು. ಇದನ್ನೆಲ್ಲ ಗುರುತಿಸಿಯೇ ಹಾಗೆ ಆಗ ಹೇಳಿರಲಿಕ್ಕೆ ಸಾಕೆಂದು ನಾವು ಭಾವಿಸಿದೆವು.

ನಮ್ಮ ಬರುವಿಕೆಯ ಕಾರಣವನ್ನು ಅವರು ಕೇಳಿಕೊಂಡರು. ಪ್ರಿನ್ಸಿಪಾಲ್ ಗೋಕಾಕರ ಅಭಿಪ್ರಾಯವನ್ನು ಸಹ ನಾವು ನಿವೇದಿಸಿದೆವು. ಸ್ವಲ್ಪ ಏನೋ ವಿಚಾರಿಸುವಂತೆ ಸುಮ್ಮನೆ ಕುಳಿತರು. ಯಾವುದೋ ಒಂದು ನಿರ್ಧಾರಕ್ಕೆ ಬಂದು ನುಡಿದರು.

‘‘ಯಾಕಾಗ ಒಲ್ಲದು; ನಾನು ಬರುತ್ತೇನೆ. ಗೋಕಾಕರನ್ನೂ ಕರೆದು ತರಲು ಪ್ರಯತ್ನಿಸುತ್ತೇನೆ’’.

ಆಗ ನಮ್ಮ ಆನಂದಕ್ಕೆ ಪಾರವೇ ಉಳಿಯಲಿಲ್ಲ. ದೇವರ ಹತ್ತಿರ ಒಂದು ಕಣ್ಣು ಬೇಡಿದರೆ ಅವನು ಎರಡು ಕಣ್ಣುಗಳನ್ನು ಕೊಟ್ಟಂತಾಯಿತು. ನಮ್ಮ ಉತ್ಸಾಹವು ಇಮ್ಮಡಿಸಿತು. ಉತ್ಸವದ ಸಂಘಟನೆಯನ್ನು ಭರದಿಂದ ಸಾಗಿಸಿದೆವು. ನಾಲ್ಕಾರು ದಿನಗಳಲ್ಲಿ ಕರೆಯೋಲೆಗಳೆಲ್ಲ ಅಚ್ಚಾದವು. ಸುತ್ತಲಿನ ಹಳ್ಳಿಗಳಿಗೂ ಹೋದುವು. ದೂರದೂರದ ಸ್ನೇಹಿತರಿಗೂ ತಲುಪಿದುವು.

ಮಾತು ಕೊಟ್ಟಂತೆ ಪ್ರಾಧ್ಯಾಪಕ ಮುಗಳಿಯವರು ಪ್ರಿನ್ಸಿಪಾಲ್ ಗೋಕಾಕರನ್ನು ಕರೆದುಕೊಂಡೇ ಬಂದರು. ಆ ಗಡಿಯಲ್ಲೆಲ್ಲ ಕನ್ನಡದ ಬೆಳಕು ಬೆಳಗಿತು.

ಮುಗಳಿಯವರು ಒಮ್ಮೆ ಒಂದು ಊರಿಗೆ ಬಂದು ಹೋಗುವುದರಿಂದ ಮಂತ್ರದ ಕೋಲನ್ನಾಡಿಸಿದಂತೆ ಕನ್ನಡ ಭಾಷೆಯ ಸ್ಥಿತಿ ಒಮ್ಮೆಲೇ ಅಲ್ಲಿ ಸುಧಾರಿಸಿ ನಿಲ್ಲುವುದೆಂದಲ್ಲ. ಅವರು ಒಂದು ಊರಿಗೆ ಬಂದರೆ ಕೇವಲ ಒಂದು ಉಪನ್ಯಾಸಕ್ಕೆಂದು ಹೋಗಿ ಬರುವುದಿಲ್ಲ. ಅವರು ಹೋಗಿ ಬರುವ ಸ್ಥಳಗಳ ಜನತೆಯೊಡನೆಲ್ಲ ಅವರು ಕನ್ನಡಿಗರೇ ಇರಲಿ-ಮರಾಠಿಗರೇ ಇರಲಿ-ಮುಂದೆಯೂ ಸತತ ಸಂಬಂಧವನ್ನು ಇಟ್ಟುಕೊಂಡು, ಆ ಜನತೆಯ ಸದ-ಸತ್ ವಿವೇಕದಿಂದ ಬಾಳುವಂತೆ ಯತ್ನಿಸುತ್ತಾರೆ. ಈ ಸತತೋದ್ಯಮದಲ್ಲಿಯೇ ಕನ್ನಡದ ನಂದಾದೀಪಕ್ಕೆ ಎಣ್ಣೆ ಎರೆದಂತಾಗುತ್ತದೆ.

ಅದರಲ್ಲಿಯೇ ಮುಗಳಿಯವರ ಜೀವನದ ಪ್ರಭಾವವಿದೆ, ಪ್ರಕಾಶವಿದೆ. ಅವರು ಕನ್ನಡ ನಾಡಿನ ಉತ್ತರದ ಗಡಿಯಲ್ಲಿ ಜಮಖಂಡಿ-ಬನಹಟ್ಟಿಗಳಿಗೆ ಹೋಗಿರಲಿ, ಬೇಡಕಿಹಾಳ-ಚಿಕ್ಕೋಡಿಗಳಿಗೆ ಬಂದಿರಲಿ, ಅಥಣಿ, ಸೇಡಬಾಳ ಕಡೆಗೆ ಹಾಯ್ದಿರಲಿ, ಅವರು ಯಾವ ಕಡೆಗೆ ಹೋದರೂ ಅವರ ಶಿಷ್ಯ ಸಮುದಾಯವು ಅಲ್ಲೆಲ್ಲ ಇದೆ. ಅದು ಕಾಲೇಜಿನಲ್ಲಿ ಅವರ ಹತ್ತಿರ ಅಧ್ಯಯನ ಮಾಡಿದ ಶಿಷ್ಯ ಸಮುದಾಯವೆಂದಲ್ಲ. ಅವರಂತೂ ಇರಬಹುದು; ಆದರೆ ಅವರ ಕಾಲೇಜು ವಿದ್ಯಾರ್ಥಿ ಬಳಗಕ್ಕಿಂತ ಅವರಲ್ಲಿ ಹೋಗಿ ಬಂದು, ಸಾಹಿತ್ಯ-ಸಂಸ್ಕೃತಿಗಳ ಅಭ್ಯಾಸವನ್ನು ಸಾಗಿಸಿದ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಂಡ-ವ್ಯಕ್ತಿಗಳ ಗುಂಪೂ ಹಿರಿದಾಗಿದೆ. ಈ ಸುತ್ತಲಿನ ಸೀಮೆಯಲ್ಲಿ ಮುಗಳಿಯವರ ಇಂಥ ಶಿಷ್ಯಕೋಟಿಯೇ ಒಂದು ರೂಪುಗೊಂಡಿದೆ. ಇದು ಅತಿಶಯೋಕ್ತಿಯ ಮಾತಲ್ಲ. ಮುಗಳಿಯವರ ಇಂಥ ಶಿಷ್ಯ ಸಮುದಾಯದಿಂದ ನಡೆಯುವ ಕನ್ನಡ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆಲ್ಲ ಈ ಸೀಮಾಪುರುಷರ ಸಲಹೆ-ಸಹಕಾರ, ಮಾರ್ಗದರ್ಶನಗಳು ಇದ್ದೇ ಇರುತ್ತವೆ.

ಇತ್ತೀಚೆಗೆ ಈ ಭಾಗದ ಗಡಿಯಲ್ಲಿ ಕಂಡುಬರುವ ಕನ್ನಡ ತರುಣ ಲೇಖಕರ ಬಳಗವೆಲ್ಲವೂ ಶ್ರೀಮುಗಳಿಯವರ ಕೃಷಿಯ ಫಲವೆಂದರೆ ಹೆಚ್ಚು ಹೇಳಿದಂತಾಗದು. ಅಥಣಿಯ ಗ್ರಂಥಮಾಲೆಯಾಗಲಿ, ಸೇಡಬಾಳದ ಶಾಂತಿ ಸೇವಾ ಸದನವಾಗಲಿ, ಶಮನೇವಾಡಿಯ ಸ್ನೇಹಪ್ರಕಾಶನವಾಗಲಿ, ಸಾಂಗ್ಲಿಯ ಶಾಂತಿ ಸೇವಾ ಸದನವಾಗಲಿ, ಎಲ್ಲ ಕನ್ನಡ ಪ್ರಕಾಶನ ಪ್ರಣತಿಗಳಿಗೆ ಬೆಳಕನ್ನು ಇತ್ತವರು ಮುಗಳಿಯವರೇ. ಹೊತ್ತಿಸಿಕೊಂಡವರು ಹಲವರಾಗಿದ್ದಾರೆ.

ಕೇವಲ ಕನ್ನಡ ಸಾಹಿತ್ಯದ ಪ್ರಕಾಶನ ಸಂಸ್ಥೆಗಳಷ್ಟೇ ಅಲ್ಲ. ಈ ಭಾಗದ ಅನೇಕ ವಿದ್ಯಾಸಂಸ್ಥೆಗಳು ರೂಪುಗೊಂಡು ತಲೆಯೆತ್ತಿ ನಿಲ್ಲುವುದರಲ್ಲಿಯು ಮಗುಳಿಯವರ ಶಕ್ತಿಯೂ ವ್ಯಯವಾಗಲಿದೆ. ಇದನ್ನು ಆಯಾ ಸಂಸ್ಥೆಗಳ ಸಂಚಾರಕ ವರ್ಗವೆಲ್ಲ ಬಲ್ಲುದು. ಅವರು ಭೇಟಿ ಕೊಡದ ಶಿಕ್ಷಣ ಸಂಸ್ಥೆಗಳೇ ಈ ಭಾಗದಲ್ಲಿ ವಿರಳವೆಂದರೆ ಅತಿಶಯೋಕ್ತಿಯಾಗದು. ಹೀಗೆ ಮುಗಳಿಯವರು ಹೋದ-ಹೋದಲ್ಲೆಲ್ಲ ಕನ್ನಡದ ಕನ್ನಡಿಯನ್ನು, ಒಂದು ನವೋದಯ ದೃಷ್ಟಿಯನ್ನು ನೀಡದೆ ಅವರು ಮರಳಿ ಬಂದುದಿಲ್ಲ. ಇಂಥ ದೃಷ್ಟಿ ದಾನದಿಂದಲೇ ಈ ಭಾಗದ ಕನ್ನಡ ನೆಲವು ಕನ್ನಡ ತಾಯಿಯ ಮಡಲಿಗೆ ಉಳಿಯಿತೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ಡಾ. ಮುಗಳಿಯವರು ಚಳವಳಿಗಾರರಲ್ಲ, ಕೆಲಸಗಾರರು, ತಮ್ಮ ಕರ್ತವ್ಯವನ್ನು ತಾವು ಮಾಡುತ್ತ ಹೋದರಾಯಿತು. ಅದರ ಫಲವು ತನ್ನಿಂದ ತಾನೇ ಲಭಿಸುವುದೆಂದು ಅವರ ನಂಬುಗೆಯಾಗಿದೆ. ಈ ನಂಬಿಕೆಯಿಂದಲೇ ಅವರು ಸಾಂಗ್ಲಿ, ಮೀರಜ, ಹಾತಕಣಗಲೆ ಇತ್ಯಾದಿ ಭಾಗಗಳ ಜನತೆಯಲ್ಲಿಯೂ ಕೂಡ ಕನ್ನಡದ ಅರಿವನ್ನುಂಟು ಮಾಡಿದುದನ್ನು ನಾವು ಕಾಣುತ್ತೇವೆ. ತಮ್ಮ ನಿತ್ಯದ ವ್ಯವಹಾರ, ಸಾರ್ವಜನಿಕ ಜೀವನಗಳಲ್ಲಿ ಮಾತ್ರ ಮಹಾರಾಷ್ಟ್ರದ ಮುಂದಾಳುಗಳಾಗಿದ್ದ ಅನೇಕ ಮೇಧಾವಿಗಳೂ ಕೂಡ ತಮ್ಮ ಹೃದಯದಲ್ಲಿ ತಾವು ಕನ್ನಡಿಗರೆಂಬ ದಿವ್ಯ ಬೆಳಕನ್ನು ಪಡೆದವರಾಗಿದ್ದಾರೆ. ಆ ದೀಪವನ್ನು ಹೊತ್ತಿಸಿದವರು ಮುಗಳಿಯವರಾಗಿದ್ದಾರೆ.

       (ವಿ.ಕೃ.ಗೋಕಾಕ)

ಶ್ರೀರಂಗನಾಥ ಮುಗಳಿಯವರು ಈ ಸೀಮೆಯಲ್ಲಿ ಇರುವುದರಿಂದ ಕನ್ನಡದ ಅನೇಕ ಮುಖಂಡರೂ ಸಾಹಿತಿಗಳೂ ಅಧ್ಯಾತ್ಮ ಜೀವಿಗಳೂ ಇಲ್ಲೆಲ್ಲ ಬಂದು ಹೋಗಿದ್ದಾರೆ; ಬರುತ್ತಲೂ ಇದ್ದಾರೆ. ಅವರ ಉಪನ್ಯಾಸಗಳಿಂದ ಸಂಸ್ಕೃತಿಯು ವಿಕಾಸಗೊಂಡಿದೆ. ಕನ್ನಡದ ಆತ್ಮ ತೇಜವು ನೆರೆ ನಾಗರಿಕರ ಮನವನ್ನು ಬೆಳಗಿದೆ. ಇದರ ಜೊತೆಯಲ್ಲಿಯೇ ‘ಅಂತರ್ ಭಾರತೀ’ ಸಂಸ್ಥೆಯ ಮುಖಾಂತರ ಡಾ. ಮುಗಳಿಯವರು ಕನ್ನಡ ಸಾಹಿತ್ಯ ರಸದೂಟವನ್ನು ಮರಾಠಿಗರಿಗೂ ಮರಾಠಿ ಭಾಷೆಯಲ್ಲಿಯೇ ಉಣಬಡಿಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರಗಳ ಸಾಂಸ್ಕೃತಿಕ ಮೂಲವು ಒಂದೇ ಎಂಬ ತಿಳುವಳಿಕೆಯನ್ನು ಮಹಾರಾಷ್ಟ್ರದ ಜನತೆಯೊಡನೆ ಸಹಜೀವನವು ರೂಪುಗೊಂಡಿದೆ; ಭಾವೈಕ್ಯವು ಸಾಧಿಸಿದೆ. ಬೆಳಗಾವಿಯ ಸುತ್ತಮುತ್ತಲೂ ಕಾಣುವಂಥ ಮರಾಠಿಗಳಲ್ಲಿಯ ಚಳವಳಿಯ ಮನೋವೃತ್ತಿಯು ಇಲ್ಲಿ ನೋಡಲು ಸಿಕ್ಕುವುದಿಲ್ಲ. ಇದಕ್ಕೆಲ್ಲ ಜನತೆಯಲ್ಲಿಯ ಈ ಸದ-ಸದ್ವಿವೇಕ ಬುದ್ಧಿಯ ಉದಯವೇ ಕಾರಣವಾಗಿದೆ. ಅದಕ್ಕೆ ಈ ಸಮದೃಷ್ಟಿಯ, ರಸಸೃಷ್ಟಿಯ ‘ರಸಿಕರಂಗ’ರು ಬಹುಮಟ್ಟಿಗೆ ಕಾರಣವೆಂದು ಈ ಭಾಗದ ನಾವು ಖಚಿತವಾಗಿ ಭಾವಿಸಿದ್ದೇವೆ.

share
ಮಿರ್ಜಿ ಅಣ್ಣಾರಾಯ
ಮಿರ್ಜಿ ಅಣ್ಣಾರಾಯ
Next Story
X