ಬಣಕಲ್: ಪತ್ನಿ ಕೊಲೆಗೆ ಯತ್ನಿಸಿದ ಪತಿ

ಬಣಕಲ್, ಸೆ.3: ಕಾರನ್ನು ಪತ್ನಿಯ ಮೇಲೆ ಹರಿಸಿ ಕೊಲೆ ನಡೆಸಲು ಪತಿಯೋರ್ವ ಮುಂದಾಗಿರುವ ಘಟನೆ ಬಣಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಬಿಳ್ಳೂರು ಗ್ರಾಮದ ಪ್ರವೀಣ್ ಎಂಬಾತ ಶನಿವಾರ ಬಿಳ್ಳೂರು ಗ್ರಾಮದಲ್ಲಿ ಪತ್ನಿ ಅಶ್ವಿನಿ ಮೇಲೆ ಎರಡು ಬಾರಿ ಕಾರಿನಿಂದ ಗುದ್ದಿ ಕೊಲ್ಲಲು ಯತ್ನಿಸಿದ್ದು, ಪತ್ನಿ ಅಶ್ವಿನಿ ಗಂಬೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದ್ದಾರೆ.
ಈ ಬಗ್ಗೆ ಬಣಕಲ್ ಠಾಣೆಗೆ ಪ್ರವೀಣ್ ಪತ್ನಿ ಅಶ್ವಿನಿ ದೂರು ನೀಡಿದ್ದಾರೆ ಎನ್ನಲಾಗಿದೆ.
ಅಶ್ವಿನಿಯವರು ಕಳೆದ 20 ವರ್ಷಗಳ ಹಿಂದೆ ಪ್ರವೀಣ್‍ನನ್ನು ಮದುವೆಯಾಗಿದ್ದಾರೆ. ವಿವಾಹದ ಬಳಿಕ ಪತಿ ಪ್ರವೀಣ್ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದು, ಆಗಾಗ ಜಗಳವಾಗುತ್ತಿತ್ತು. ಇದರಿಂದ ಇಬ್ಬರು ಬೇರೆ ಬೇರೆ ವಾಸಿಸುತ್ತಿದ್ದರು. ಶನಿವಾರ ಕಾರಿನಲ್ಲಿ ಬಂದ ಪತಿ ಪ್ರವೀಣ್ 2 ಬಾರಿ ಕಾರಿನ ಮುಂಬಾಗದಿಂದ ಗುದ್ದಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪತ್ನಿ ಅಶ್ವಿನಿ ದೂರಿನಲ್ಲಿ ತಿಳಿಸಿದ್ದಾರೆ.
ಗಾಯಗೊಂಡ ಅಶ್ವಿನಿಯವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.





