ಗಣಪತಿ ಪೆಂಡಾಲಿನಲ್ಲಿ ವಾಸವಿ ಕ್ಲಬ್‍ನಿಂದ ಚಿತ್ರಕಲಾ, ಗಾಯನ ಸ್ಪರ್ಧೆ

ಚಿಕ್ಕಮಗಳೂರು, ಸೆ.3: ನಗರದ ಶ್ರೀ ಬೋಳರಾಮೇಶ್ವರ ದೇವಾಲಯ ಆವರಣದ ಆಝಾದ್ ಪಾರ್ಕ್ ಸಾರ್ವಜನಿಕ ಗಣಪತಿ ಪೆಂಡಾಲಿನಲ್ಲಿ ವಾಸವಿ ಕ್ಲಬ್ ಭಾನುವಾರ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಜ್ಯೂನಿಯರ್ ಕಾಲೇಜ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪಿ.ಪೂರ್ಣಿಮಾ ಹಾಗೂ ಗಾಯನ ಸ್ಪರ್ಧೆಯಲ್ಲಿ ಸೇಂಟ್ ಮೇರೀಸ್ ಶಾಲೆಯ ವಂದಿತಾ ಯಾಜಿ ಪ್ರಥಮ ಸ್ಥಾನ ಗಳಿಸಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಕುವೆಂಪು ವಿದ್ಯಾನಿಕೇತನದ ವಿದ್ಯಾರ್ಥಿನಿ ಬಿ.ಎ.ಮೌಲ್ಯ ದ್ವಿತೀಯ ಹಾಗೂ ಸಂಜೀವಿನಿ ವಿದ್ಯಾಸಂಸ್ಥೆಯ ಪಿ.ವಿದ್ಯಾ ತೃತೀಯ ಸ್ಥಾನ ಗಳಿಸಿದರೆ ಗಾಯನ ಸ್ಪರ್ಧೆಯಲ್ಲಿ ಸಂತ ಜೋಸೇಫರ ಕಾನ್ವೆಂಟ್‍ನ ವಿದ್ಯಾರ್ಥಿನಿ ಸಿ.ಪಿ.ಅನುಶ್ರೀ ದ್ವಿತೀಯ ಮತ್ತು ಜೆವಿಎಸ್ ಶಾಲೆಯ ಜಯಶ್ರೀ ತೃತೀಯ ಸ್ಥಾನ ಪಡೆದುಕೊಂಡರು.
ಆರು ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನಕ್ಕೆ ಪಾತ್ರರಾದರು, ನಗರದ ವಿವಿಧ ಶಾಲೆಗಳ 117 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಬೆಳಗಿನಿಂದ ಮಧ್ಯಾಹ್ನದವರೆಗೆ ಸಿದ್ದಿವಿನಾಯಕನ ವಿವಿಧ ರೂಪ ಮತ್ತು ವಿವಿಧ ಭಂಗಿಯ ಚಿತ್ರಗಳನ್ನು ರಚಿಸಿದರೆ 28 ವಿದ್ಯಾರ್ಥಿಗಳು ಗಣೇಶನ ವಿವಿಧ ಭಕ್ತಿಗೀತೆಗಳನ್ನು ಹಾಡಿ ಗಮನ ಸೆಳೆದರು.
ಈ ವೇಳೆ ಜಿಲ್ಲಾ ಪೋಲಿಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಬಹುಮಾನ ವಿತರಿಸಿ ಮಾತನಾಡಿ, ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ರಾಜ್ಯದ ವಿವಿಧೆಡೆ ನಡೆಯುವ ಕೋಮು ಸಂಘರ್ಷಗಳನ್ನು ಪ್ರಸ್ತಾಪಿಸಿ ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳು ಜಾತ್ಯಾತೀತವಾಗಿ ಬೆಳೆಯಬೇಕು, ವಿಶಾಲ ಹೃದಯಿಗಳಾಗಬೇಕು ಎಂದು ಹೇಳಿದರು.
ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ಉಳಿಯಬೇಕಾದರೆ ಜನತೆ ಎಲ್ಲಾ ಧರ್ಮಗಳನ್ನೂ ಮತ್ತು ಎಲ್ಲಾ ಮನುಷ್ಯರನ್ನೂ ಅವರು ಹೇಗಿದ್ದಾರೋ ಹಾಗೆಯೇ ಒಪ್ಪಿಕೊಳ್ಳಬೇಕು, ಎಲ್ಲಾ ಧರ್ಮಗಳನ್ನೂ ಗೌರವಿಸುವುದನ್ನು ಕಲಿಯಬೇಕು ಎಂದು ಸಲಹೆ ಮಾಡಿದರು.
ವಾಸವಿ ಕ್ಲಬ್‍ನ ಅಧ್ಯಕ್ಷ ದಿನೇಶ್ ಗುಪ್ತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗಾಯಕರಾದ ಸಾಯಿ ಸತೀಶ್, ಅರ್ಚನಾ ರಾವ್, ಪತ್ರಿಕಾ ಛಾಯಾಗ್ರಾಹಕ ದಯಾನಂದ್, ಕಲಾವಿದರಾದ ಹರ್ಷ ಕಾವಾ, ನವೀನ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಆಝಾದ್ ಪಾರ್ಕ್ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ದಿವಾಕರ್, ಶಿವಾನಿ, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶೋಭಾ ಕೃಷ್ಣ, ವಾಸವಿ ಕ್ಲಬ್‍ನ ಉಪಾಧ್ಯಕ್ಷ ಸುಧೀರ್, ದೀಪಕ್, ಸಂಘಟನಾ ಕಾರ್ಯದರ್ಶಿ ನಿತಿನ್, ಖಜಾಂಚಿ ಪಿ.ಟಿ.ರಘುನಂದನ್, ನಿರ್ದೇಶಕರಾದ ಶೋಭಾ ಶ್ರೀಧರ್, ಚಂದ್ರಶೇಖರ್, ಕಾರ್ಯಕ್ರಮದ ಸಂಯೋಜಕ ವಿನಯ್ ಉಪಸ್ಥಿತರಿದ್ದರು.







