'ಮಂಗಳೂರು ಚಲೋ’ ಹತ್ತಿಕ್ಕಲು ಪೊಲೀಸ್ ಬಳಕೆ ಖಂಡನೀಯ: ಸಿ.ಟಿ.ರವಿ

ಬೆಂಗಳೂರು, ಸೆ.3: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ಹತ್ತಿಕ್ಕಲು ರಾಜ್ಯ ಸರಕಾರವು ಪೊಲೀಸ್ ಬಲವನ್ನು ಬಳಕೆ ಮಾಡಲು ಮುಂದಾಗಿರುವುದು ಖಂಡನಾರ್ಹ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ನಕ್ಸಲರನ್ನು ಮತ್ತು ಪ್ರಜಾತಂತ್ರ ವಿರೋಧಿಗಳನ್ನು ಮಾತುಕತೆಗೆ ಕರೆಯುವ ಸರಕಾರ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿ, ಶಾಂತಿಯುವಾಗಿ ರ್ಯಾಲಿ ನಡೆಸುವ ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕಲು ಹೊರಟಿದೆ ಎಂದು ಆರೋಪಿಸಿದರು.
ಸರಕಾರದ ಕೋಮುವಾದಿ ಹಾಗೂ ಕ್ರಿಮಿನಲ್ ನೀತಿಯನ್ನು ನಾವು ಬಯಲು ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮಂಗಳೂರು ಚಲೋ ಕಾರ್ಯಕ್ರಮ ನಿಲ್ಲುವುದಿಲ್ಲ. ರಾಜ್ಯ ಸರಕಾರದ ವೋಟ್ ಬ್ಯಾಂಕ್ ರಾಜಕಾರಣವನ್ನು ನಾವು ಬಯಲು ಮಾಡದೆ ಬಿಡುವುದಿಲ್ಲ ಎಂದು ಹೇಳಿದರು.
ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್ ಮತ್ತು ಮಂಗಳೂರಿನ ಶರತ್ ಮಡಿವಾಳ್ ಹತ್ಯೆಯಲ್ಲಿ ಪಿಎಫ್‌ಐ ಕೈವಾಡವಿರುವುದು ಸಾಬೀತಾಗಿದೆ. ಆದರೆ, ರಾಜ್ಯ ಸರಕಾರ ಪಿಎಫ್‌ಐ, ಎಸ್‌ಡಿಪಿಐ ಮತ್ತು ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸುವ ಬದಲಿಗೆ ಈ ಸಂಘಟನೆಗಳೊಂದಿಗೆ ಬೀಗತನ ಮಾಡುತ್ತಿದೆ ಎಂದು ಅವರು ಕಿಡಿಗಾರಿದರು.
ದತ್ತಪೀಠ ವಿವಾದ: ದತ್ತಪೀಠ ವಿವಾದವನ್ನು ಬಗೆಹರಿಸಲು ಸುಪ್ರೀಂಕೋರ್ಟ್ 8 ವಾರಗಳ ಅವಧಿ ನಿಗದಿ ಮಾಡಿದ್ದರೂ, ವಿವಾದ ಇತ್ಯರ್ಥಗೊಳಿಸದೆ ಮೂವರು ಸದಸ್ಯರ ಸಮಿತಿ ರಚಿಸಿರುವ ರಾಜ್ಯ ಸರಕಾರದ ನಿಲುವು ಖಂಡನೀಯ. ಈಗಾಗಲೇ ನ್ಯಾಯಾಲಯದ ಎಲ್ಲ ಹಂತದಲ್ಲೂ ಹಿಂದುಗಳ ಪರ ತೀರ್ಪು ಬಂದಿದೆ. ಆದರೆ, ರಾಜ್ಯ ಸರಕಾರಕ್ಕೆ ಈ ವಿವಾದ ಬಗೆಹರಿಸುವ ಇಚ್ಛಾಶಕ್ತಿಯಿಲ್ಲ ಎಂದು ರವಿ ದೂರಿದರು.
ಮುಜುರಾಯಿ ಇಲಾಖೆ ವರದಿ ಆಧರಿಸಿ ದತ್ತಪೀಠದಲ್ಲಿ ಹಿಂದು ಅರ್ಚಕರ ನೇಮಕವಾಗಬೇಕಿತ್ತು. ಆದರೆ, ಹಿಂದು ಪರವಾದ ತೀರ್ಪಿನ ಅನುಷ್ಠಾನಕ್ಕೆ ಸರಕಾರ ಮುಂದಾಗುತ್ತಿಲ್ಲ. ದತ್ತಪೀಠ ವಿವಾದ ಬಗೆಹರಿಸುವ ಬದಲು ನಾಸ್ತಿಕರು ಮತ್ತು ವೈಚಾರಿಕವಾಗಿ ವಿರೋಧಿಸುವವರನ್ನು ಒಳಗೊಂಡ ಸಮಿತಿ ರಚಿಸಿರುವುದನ್ನು ನಾವು ಒಪ್ಪುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದತ್ತಪೀಠ ವಿವಾದ ಬಗೆಹರಿಸದೆ ಸುಪ್ರೀಂ ಕೋರ್ಟ್ ತೀರ್ಪನ್ನು ಕಡೆಗಣಿಸಿರುವ ರಾಜ್ಯ ಸರಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗುವುದು. 1978ರಿಂದಲೂ ದತ್ತಪೀಠ ವಿಷಯದಲ್ಲಿ ಎಲ್ಲ ತೀರ್ಪುಗಳು ಹಿಂದುಗಳ ಪರವಾಗಿಯೇ ಇದೆ. ಆದರೆ, ರಾಜ್ಯ ಸರಕಾರ ಮಾತ್ರ ಓಲೈಕೆ ರಾಜಕಾರಣದ ಸಲುವಾಗಿ ವಿವಾದ ಬಗೆಹರಿಸುತ್ತಿಲ್ಲ ಎಂದು ರವಿ ದೂರಿದರು.







