ನುಡಿಯುವುದಕ್ಕಿಂತ ನುಡಿದಂತೆ ನಡೆಯುವುದು ಜೀವನದಲ್ಲಿ ಬಹಳ ಮುಖ್ಯ: ನಟರಾಜ್
ಚಿಕ್ಕಮಗಳೂರು, ಸೆ.3: ವಚನ ಎನ್ನುವುದು ಒಂದು ನಡವಳಿಕೆ, ಭರವಸೆ, ಪ್ರಮಾಣವಾಗಿದ್ದು, ನುಡಿಯುವುದಕ್ಕಿಂತ ನುಡಿದಂತೆ ನಡೆಯುವುದು ಜೀವನದಲ್ಲಿ ಬಹಳ ಮುಖ್ಯ. ಕನ್ನಡದ ನೆಲದಲ್ಲಿ ಒಂದು ಚಳುವಳಿಯ ಮೂಲಕ ಸಾಹಿತ್ಯದ ಜೀವನ ಶಿಕ್ಷಣದ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ವಚನಕಾರರ ಬದುಕು ನಮ್ಮೆಲ್ಲರ ಬದುಕಾಗಬೇಕಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕ ನಟರಾಜ್ ಎಸ್.ಕೊಪ್ಪಲು ತಿಳಿಸಿದರು.
ಅವರು ಕಡೂರು ತಾಲೂಕಿನ ದೇವನೂರು ಎಸ್.ಕೊಪ್ಪಲಿನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತು ಆಗಬೇಕು. ಆ ನಿಟ್ಟಿನಲ್ಲಿ ನಾವು ನೀವು ಕೆಲಸವನ್ನು ನಿರ್ವಹಿಸುವುದಲ್ಲದೇ ವಚನ ಸಾಹಿತ್ಯದ ಜನಸಾರವನ್ನು ಶ್ರೀಸಾಮಾನ್ಯನಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಸುತ್ತೂರು ಹಿರಿಯ ಶ್ರೀಗಳು ಕಟ್ಟಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇಡೀ ರಾಜ್ಯದಲ್ಲಿ ಒಂದೇ ದಿನ ಏಕ ಕಾಲಕ್ಕೆ ವಚನ ದಿನವನ್ನು ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಷಯ. ಈ ವಚನ ದಿನವನ್ನು ಪರಿಷತ್ತೇ ಆಚರಿಸುವುದಲ್ಲದೇ ಸರ್ಕಾರವು ಆಚರಿಸುವಂತಾಗಲಿ ಎಂದು ಆಭಿಪ್ರಾಯಿಸಿದರು.
ರಾಷ್ಟ್ರೀಯ ಬಸವ ದಳದ ಕಾರ್ಯಾಧ್ಯಕ್ಷ ಎಸ್.ಜಿ.ಬಸವರಾಜಪ್ಪ ಮಾತನಾಡಿ, ವಚನ ಸಾಹಿತ್ಯದ ವಿಚಾರಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಆಚಾರ, ವಿಚಾರಗಳನ್ನು ಅನುಸರಿಸಬೇಕು. ಆ ಮೂಲಕ ಬದುಕಿನ ಸಂಸ್ಕಾರಕ್ಕೆ ಒಂದು ಹೊಸ ಬೆಳಕು ಕಾಣಲು ಸಾಧ್ಯ ಎಂದು ನುಡಿದರು.
ಎಸ್.ಬಿ. ಕುಮಾರಸ್ವಾಮಿ ಮಾತನಾಡಿ, ಮನೆಯಲ್ಲಿದ್ದ ವಚನ ಸಾಹಿತ್ಯವನ್ನು ಜನಸಾಮಾನ್ಯರ ಸಾಹಿತ್ಯವಾಗಿಸಿದ ಕೀರ್ತಿ ವಚನ ಸಾಹಿತ್ಯದ ಪಿತಾಮಹ ಫಗು ಹಳಕಟ್ಟಿ ಅವರಿಗೆ ಸಲ್ಲುತ್ತದೆ. ನಾವು ವಚನ ಸಾಹಿತ್ಯದ ದೀವಿಗೆಯನ್ನು ಜನಸಾಮಾನ್ಯರಿಗೆ ತಲುಪಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಬಿ. ಶಿವಮೂರ್ತಿ, ಎಸ್.ಎಂ. ಶಿವಮೂರ್ತಿ, ಷಡಕ್ಷರಪ್ಪ, ಎಸ್.ವಿ. ದೇವೀರಪ್ಪ, ಎಸ್.ಕೆ. ಮಂಜುಳ, ಎಸ್.ವಿ. ಜಯಮ್ಮ , ಹತ್ತಾರು ಗ್ರಾಮದ ಶರಣರು ಭಾಗವಹಿಸಿದ್ದರು.







