ಬುಡಕಟ್ಟು ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಹಿಂಜರಿಯುತ್ತಿವೆ: ಡಾ.ಬಂಜಗೆರೆ ಜಯಪ್ರಕಾಶ್

ಬೆಂಗಳೂರು, ಸೆ.3: ಜಗತ್ತು ಬಹಳಷ್ಟು ವೇಗವಾಗಿ ಬೆಳೆಯುತ್ತಿದ್ದರೂ, ಇಂದಿಗೂ ಬಹುತೇಕ ಬುಡಕಟ್ಟು ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರುವುದರಲ್ಲಿ ಹಿಂದುಳಿದಿವೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಅಹರ್ನಿಶಿ ಪ್ರಕಾಶನದಿಂದ ಆಯೋಜಿಸಿದ್ದ ಸಿ.ಮಂಗಳ ಅವರ ‘ಕೃಷ್ಣ ಮುದ್ರಿಕೆ’ ಹಾಗೂ ಮಂಜುಳಾ ಹುಲಿಕುಂಟೆ ಅವರ ‘ದೀಪದುಳುವಿನ ಕಾತರ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ವಿವಿಧ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದಲ್ಲಿ ಮುಂದುವರಿಯುತ್ತಿದೆ. ಆದರೆ, ಹಲವು ಬುಡಕಟ್ಟು ಸಮುದಾಯಗಳು ಮುಂದಕ್ಕೆ ಚಲಿಸಿದಂತೆ ಕಾಣುತ್ತಿದ್ದರೂ, ಸಮಾಜದ ಮುಖ್ಯವಾಹಿನಿಗೆ ಬರಲು ಹಿಂದುಳಿಯುತ್ತಿವೆ ಎಂದು ಹೇಳಿದರು.
ಬುಡಕಟ್ಟು ಸಮುದಾಯಗಳಲ್ಲಿನ ಜನರು ತಾವೇ ಹಾಕಿಕೊಂಡಿರುವ ನಿರ್ಬಂಧನೆಗಳಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ವೌಢ್ಯದ ಅಂಧಕಾರದೊಳಗೆ ಸಿಕ್ಕಿಕೊಂಡು ಜೀವಂತವಾಗಿ ಬಲಿ ಪಶುಗಳಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬುಡಕಟ್ಟು ಸಮುದಾಯಗಳನ್ನು ಗಂಭೀರವಾಗಿ ಅರ್ಥ ಮಾಡಿಕೊಂಡು, ಅಧ್ಯಯನ ಮಾಡಿ ಸಾಮಾನ್ಯ ಜನರಿಗೆ ಅರ್ಥ ಮಾಡಿಸಬೇಕು ಹಾಗೂ ಅವರು ಸಮಾಜದ ಮುಖ್ಯವಾಹಿನಿ ಕಡೆಗೆ ಬರುವ ನಿಟ್ಟಿನಲ್ಲಿ ಸಹಕಾರಿಯಾಗಬೇಕು ಎಂದರು.
ಕಾದಂಬರಿ ಬರೆಯುವುದು ಕವಿತೆ ಬರೆದಷ್ಟು ಸುಲಭವಾದ ವಿಷಯವಲ್ಲ. ಹಲವು ತಲೆ ಮಾರುಗಳು, ವ್ಯಕ್ತಿಗಳ ಪಾತ್ರಗಳು ಬದಲಾಗುತ್ತವೆ. ಈ ಸನ್ನಿವೇಶವನ್ನು ಓದುಗರಿಗೆ ಅಚ್ಚು ಕಟ್ಟಾಗಿ, ಓದಿಸುವಂತೆ ಕಟ್ಟಿಕೊಡಬೇಕು. ಜೊತೆಗೆ, ವ್ಯಕ್ತಿ ಕೇಂದ್ರಿತ ಕಾದಂಬರಿ ಗಳಿಗಿಂತ ಸಮುದಾಯ ಆಧಾರಿತ ಕಾದಂಬರಿಗಳು ಹೆಚ್ಚು ಅರ್ಥ ಪೂರ್ಣವಾಗಿರುತ್ತದೆ ಎಂದು ತಿಳಿಸಿದರು.
ಕವಿಯತ್ರಿ ಮಂಜುಳಾ ಹುಲಿಕುಂಟೆ ಅವರ ಕವಿತೆಗಳು ಸಹಜವಾದ, ಅಲಂಕಾರ ನಿರೀಕ್ಷಿಸದೇ ಕವಿತೆ ರಚಿಸಿದ್ದಾರೆ. ದೈನಿಕ ಬಳಕೆ ಮಾಡುವ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ರಚಿಸಿದ್ದಾರೆ. ಪ್ರೇಮದ ಕಾವಿನ ಹಾಗೂ ಭಾವನಾತ್ಮಕ ಕವಿತೆಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಲೇಖಕಿ ಮಂಜುಳಾ ಅವರ ಕಾದಂಬರಿ ಒಂದು ಹದವಾದ ಜಾನಪದ ಅಧ್ಯಯನ ಕೃತಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಒಂದು ಕುಟುಂಬ, ಕುಲದ ಹೆಸರು, ಕೆಲವು ಪಾತ್ರಗಳು ಅಥವಾ ಒಂದಿಷ್ಟು ಘಟನಾವಳಿಗಳಿಗೆ ಕೊನೆಯಾಗಿಲ್ಲ. ಹೆಚ್ಚೂ ಕಡಿಮೆ ಅರ್ಧ ಶತಮಾನದ ಕಾಲ ವ್ಯಾಪ್ತಿಯನ್ನು ನಿರ್ಧಿಷ್ಟವಾಗಿ ಗೊಲ್ಲ ಸಮುದಾಯದ ಬದುಕಿನೊಂದಿಗೆ ಜೋಡಿಸಿ ಇಲ್ಲಿ ನೀಡಲಾಗಿದೆ. ಅಲ್ಲದೆ, ಬುಡಕಟ್ಟುಗಳ ಸಂಪೂರ್ಣ ಸಾಂಸ್ಕೃತಿಕ ವಿವರಗಳನ್ನು ಓದುಗರಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಎಂದು ಬಣ್ಣಿಸಿದರು.
ವಿಮರ್ಶಕ ಡಾ.ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಾಹಿತ್ಯ ಲೋಕದಲ್ಲಿ ಪುರುಷರ ಪಾತ್ರ ಹೆಚ್ಚಿನದಾಗಿ ಬರೆಯುತ್ತಾರೆ ಎಂಬ ಪೂರ್ವಗ್ರಹಗಳಿವೆ. ಆದರೆ, ಇದಕ್ಕೆ ವಿರುದ್ಧ ಎಂಬಂತೆ ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ವಿಸ್ಮಯದಂತೆ ಮಹಿಳಾ ಸಾಹಿತಿಗಳು ಕಾಲಿಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಾಹಿತ್ಯ ಲೋಕ ಪ್ರವೇಶಿಸಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಕವಿಯತ್ರಿ ಡಾ.ಎಚ್.ಎಲ್.ಪುಷ್ಪ, ಅಹರ್ಶಿನಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, ಲೇಖಕಿ ಸಿ.ಮಂಗಳ, ಕವಿಯತ್ರಿ ಮಂಜುಳಾ ಹುಲಿಕುಂಟೆ ಉಪಸ್ಥಿತರಿದ್ದರು.







