ಕುಂಬಾರ ಸಮುದಾಯವನ್ನು ಎಸ್ಟಿಗೆ ಸೇರಿಸಲು ಒತ್ತಾಯ
ಬೆಂಗಳೂರು, ಸೆ.3: ರಾಜ್ಯದಲ್ಲಿರುವ ಕುಂಬಾರ ಸಮುದಾಯದ ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಈ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಬೇಕೆಂದು ರಾಜ್ಯ ಕುಂಬಾರ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ರವಿವಾರ ನಗರದ ಎನ್‌ಜಿಒ ಸಭಾಂಗಣದಲ್ಲಿ ಆಯೋಜಿಸಿದ್ದ ಸಮುದಾಯದ ಹಿರಿಯರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮುದಾಯ ಎಲ್ಲದರಲ್ಲೂ ತೀರ ಹಿಂದುಳಿದಿದೆ. ಆದರೂ, ಸರಕಾರ ನಮ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿರುವುದು ಎಷ್ಟು ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಸಮುದಾಯ ಅಭಿವೃದ್ಧಿಯಾಗಬೇಕಾದರೆ ಪ್ರಸ್ತುತ ದೇವರಾಜ ಅರಸು ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂಭಕಲಾ ಅಭಿವೃದ್ಧಿ ಮಂಡಳಿಯನ್ನು ಪ್ರತ್ಯೇಕ ಮಾಡಬೇಕು ಹಾಗೂ ವಾರ್ಷಿಕ 50 ಕೋಟಿ ರೂ.ಗಳಷ್ಟು ಅನುದಾನ ನೀಡಬೇಕು. ಜೊತೆಗೆ, ನಮ್ಮ ಸಮುದಾಯದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸರ್ವಜ್ಞಶ್ರೀ ಪ್ರಶಸ್ತಿ ನೀಡಬೇಕು ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ನಿವೇಶನ ಪಡೆದು ಮುಂದಿನ ದಿನಗಳಲ್ಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ನೆರವಾಗುವಂತೆ ವಿದ್ಯಾರ್ಥಿ ನಿಲಯಗಳು ಮತ್ತು ವಿಶ್ರಾಂತಿ ಗೃಹವನ್ನು ಸ್ಥಾಪಿಸಲು ಸಂಘ ಮುಂದಾಗಿದೆ ಎಂದು ಅವರು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಾಬು ಎಸ್. ಕುಂಬಾರ ಮಾತನಾಡಿ, ರಾಜ್ಯಾದ್ಯಂತ ಕುಂಬಾರ ಸಮುದಾಯದ ಜನರು ಹೆಚ್ಚಿರುವ ಸ್ಥಳಗಳಲ್ಲಿ ರಾಜ್ಯ ಸರಕಾರದಿಂದಲೇ ಸರ್ವಜ್ಞ ಭವನ ನಿರ್ಮಾಣ ಮಾಡಿಕೊಡಬೇಕು. ಹಾಗೂ ಕರ ಕುಶಲ ಗುಡಿ ಕೈಗಾರಿಕೆ ಉತ್ಪನ್ನಗಳನ್ನು ಗುಣಮಟ್ಟದ ಬೆಲೆಗೆ ಖರೀದಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 15 ರಿಂದ 20 ಲಕ್ಷ ಕುಂಬಾರ ಜನಾಂಗಕ್ಕೆ ಸೇರಿದ ಜನರಿದ್ದಾರೆ. ಆದರೆ, ದೇಶಾದ್ಯಂತ ಕುಂಬಾರ, ಕುಲಾಲ, ಪ್ರಜಾಪತಿ, ಗುಂಡಾಭಕ್ತರು, ಗೌಣರು ಎಂಬ ಹೆಸರುಗಳಿಂದ ಹಂಚಿಹೋಗಿದ್ದಾರೆ. ಹೀಗಾಗಿ, ಸರಿಯಾದ ರಾಜಕೀಯ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಈ ಸಮುದಾಯದವನ್ನು ಸಂಘಟಿಸುವುದೇ ಸಂಘದ ಪ್ರಮುಖ ಉದ್ದೇಶ ಎಂದು ವಿವರಿಸಿದರು.
ಈ ವೇಳೆ ಕಂಬಾರಿಕೆ ವೃತ್ತಿಯಲ್ಲಿ ನಿರತರಾಗಿರುವ ರಾಜ್ಯದ 17 ಹಿರಿಯ ಮಹಿಳೆಯರನ್ನು ಹಾಗೂ ಎಸೆಸೆಲ್ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗೌರವಿಸಿ ಸನ್ಮಾನಿಸಲಾಯಿತು.







