ಟ್ವಿಟ್ಟರಿಗರ ಮನಗೆದ್ದ ಹರ್ಭಜನ್ ಪೋಸ್ಟ್ ಮಾಡಿದ ಭಾವನಾತ್ಮಕ ವಿಡಿಯೋ

ಹೊಸದಿಲ್ಲಿ, ಸೆ.3: ಭಾರತದ ಇತರ ಕ್ರಿಕೆಟಿಗರಂತೆ ಹರ್ಭಜನ್ ಸಿಂಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಶನಿವಾರ ಟ್ವಿಟರ್‌ನಲ್ಲಿ ಭಜ್ಜಿ ಪೋಸ್ಟ್ ಮಾಡಿರುವ ಭಾವನಾತ್ಮಕ ವಿಡಿಯೋ ಎಲ್ಲರ ಹೃದಯ ಕಲಕುವಂತಿದೆ.
ವಿಡಿಯೋದಲ್ಲಿ ಕೈಯಿಲ್ಲದ ಪೋರ ಹಾಗೂ ಅದರ ಪುಟಾಣಿ ತಮ್ಮನ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ. ಹಾಸಿಗೆ ಮೇಲೆ ಮಲಗಿದ್ದ ನವಜಾತ ಶಿಶು ಚೀಪುತ್ತಿದ್ದ 'ಟೀತರ್ ಟಾಯ್' ಬಾಯಿಂದ ತಪ್ಪಿಹೋದಾಗ ಅದು ಚೀರಾಡಲಾರಂಭಿಸಿತು. ಆಗ ಅಲ್ಲೆ ಇದ್ದ ಕೈಯಿಲ್ಲದ ಪೋರ ತನ್ನ ಬಾಯಿಯಿಂದಲೇ ಟೀತರನ್ನು ಹೆಕ್ಕಿಕೊಂಡು ಬಂದು ಮಗುವಿನ ಬಾಯಿಗೆ ಎಚ್ಚರಿಕೆಯಿಂದ ಇಡುತ್ತಾನೆ. ಮಗು ಮತ್ತೆ ಟೀತರ್ ಚೀಪುತ್ತಾ, ಚೀರಾಡುವುದನ್ನು ನಿಲ್ಲಿಸುವ ತನಕ ಕಾಯುತ್ತಾನೆ.
ಹರ್ಭಜನ್ ಪೋಸ್ಟ್ ಮಾಡಿರುವ ವಿಡಿಯೋ ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು 4100 ಜನರು ಲೈಕ್ ಮಾಡಿದ್ದಾರೆ. 1200 ರೀಟ್ವೀಟ್ ಮಾಡಿದರೆ, 130 ಮಂದಿ ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಭಜ್ಜಿ, ‘‘ಇದನ್ನು ನೋಡಿ ನನಗೆ ಕಣ್ಣೀರು ಬಂತು... ಮಾತೇ ಹೊರಡದಂತಾಯಿತು....ಈ ಸಹೋದರರಿಂದ ಬಹಳಷ್ಟು ಕಲಿಯುವುದಿದೆ. ಎಂದು ಟ್ವೀಟ್ ಮಾಡಿದ್ದಾರೆ.







