ಮೋಡ ಬಿತ್ತನೆ ಕಾರ್ಯಕ್ಕೆ ಹುಬ್ಬಳ್ಳಿಯಲ್ಲಿ ಚಾಲನೆ
ಮೋಡ ಬಿತ್ತನೆಯಿಂದ ಶಿಗ್ಗಾವಿಯಲ್ಲಿ ಮಳೆ

ಬೆಂಗಳೂರು, ಸೆ.3: ಸತತ ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರಿಗೆ ನೆರವಾಗುವ ದೃಷ್ಟಿಯಿಂದ ಕೈಗೊಂಡಿರುವ ‘ಮೋಡ ಬಿತ್ತನೆ’ ಕಾರ್ಯಕ್ಕೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಚಾಲನೆ ನೀಡಿದರು.
ರವಿವಾರ ಮಧ್ಯಾಹ್ನ 3:30ರ ಸುಮಾರಿಗೆ ಮೋಡ ಬಿತ್ತನೆ ಕಾರ್ಯಕ್ಕೆ ವಿಮಾನ ನಿಲ್ದಾಣದ ಹೊರ ವಿಮಾನ, ಹಾವೇರಿ ಜಿಲ್ಲೆಯ ಶಿಗ್ಗಾವಿ, ಸವಣ್ಣನೂರು, ಧಾರವಾಡ ಗ್ರಾಮೀಣ ಮತ್ತು ಶಿರಹಟ್ಟಿ ಪ್ರದೇಶದಲ್ಲಿ ಮೋಡ ಬಿತ್ತನೆ ಮಾಡಿದ್ದು, ಅಲ್ಲಿ ಮಳೆಯೂ ಆರಂಭವಾಗಿದೆ. ಆ ಪ್ರದೇಶದಲ್ಲಿ ಸಂಪೂರ್ಣ ಬರ ಪರಿಸ್ಥಿತಿ ಇದ್ದು, ಮಳೆಯ ಯಾವುದೇ ನಿರೀಕ್ಷೆ ಇರಲಿಲ್ಲ. ಆದರೆ, ಮೋಡ ಬಿತ್ತನೆಯಿಂದ ಮಳೆ ಪ್ರಾರಂಭ ಆಗಿದೆ. ನೂರು ಕಿ.ಮೀ ವ್ಯಾಪ್ತಿಯಲ್ಲಿ ಈ ಪ್ರದೇಶದಲ್ಲಿ 7ಮೋಡಗಳ ಮೇಲೆ 14 ಬೆಂಕಿ ಉಗುಳುವ ಸಾಧನಗಳನ್ನು ಉಪಯೋಗಿಸಲಾಗಿದೆ ಎಂದು ತಿಳಿಸಲಾಗಿದೆ.
ಮೋಡ ಬಿತ್ತನೆಯ ವಿಶೇಷ ವಿಮಾನ ರವಿವಾರ ಮಧ್ಯಾಹ್ನ 3:30ಕ್ಕೆ ಹುಬ್ಬಳ್ಳಿಯಿಂದ ತನ್ನ ಹಾರಾಟ ಪ್ರಾರಂಭಿಸಿ ಸಂಜೆ 5:20ಕ್ಕೆ ಮರಳಿ ಧರೆಗಿಳಿಯಿತು. ವಾಯುಭಾರ ಕುಸಿತದಿಂದ ಅಥವಾ ಬೇರೆ ಯಾವುದೇ ನೈಸರ್ಗಿಕ ಕಾರಣದಿಂದ ಈ ಪ್ರದೇಶದಲ್ಲಿ ಮಳೆ ನಿರೀಕ್ಷೆ ಇರಲಿಲ್ಲ. ಮೋಡ ಬಿತ್ತನೆ ಪರಿಣಾಮ ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಉತ್ತಮ ಮಳೆಯಾಗಿದೆ ಎಂದು ತಿಳಿಸಲಾಗಿದೆ.
ಮೋಡ ಬಿತ್ತನೆ ಚಾಲನೆ ಕಾರ್ಯಕ್ರಮದಲ್ಲಿ ಶಾಸಕರಾದ ಎನ್.ಎಚ್.ಕೋನರೆಡ್ಡಿ, ಸಿ.ಎಚ್.ಶಿವಳ್ಳಿ, ಬಿ.ಆರ್.ಯಾವಗಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







