ಅಕ್ಟೋಬರ್‍ನಲ್ಲಿ ಇಸ್ರೇಲ್ ತಂಡ ರಾಜ್ಯಕ್ಕೆ ಭೇಟಿ: ಸಂಸದ ಸಿ.ಎಸ್.ಪುಟ್ಟರಾಜು

ಮಂಡ್ಯ, ಸೆ.3: ಇಸ್ರೇಲ್ ಮಾದರಿಯಲ್ಲಿ ಕೃಷಿಗೆ ಉತ್ತೇಜನ ನೀಡಿ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದ್ದು, ಅಕ್ಟೋಬರ್‍ನಲ್ಲಿ ಇಸ್ರೇಲ್‍ನ ರೈತರ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಟ್ಟಿಗೆ ತಾವೂ ಇಸ್ರೇಲ್‍ಗೆ ತೆರಳಿ ಅಲ್ಲಿನ ಕೃಷಿ ತಜ್ಞರೊಂದಿಗೆ 18 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿ ಇಸ್ರೇಲ್ ತಂತ್ರಜ್ಞಾನವನ್ನು ಮಂಡ್ಯ ಜಿಲ್ಲೆಯಲ್ಲೂ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಕರ್ನಾಟಕಕ್ಕೆ ಇಸ್ರೇಲ್ ತಜ್ಞರ ತಂಡವನ್ನು ಆಹ್ವಾನಿಸಿದ್ದು, ಅಕ್ಟೋಬರ್ ತಿಂಗಳಲ್ಲಿ ತಂಡ ರಾಜ್ಯಕ್ಕೆ ಭೇಟಿ ನೀಡಲಿದೆ. ತಂಡವನ್ನು ಮಂಡ್ಯ ಜಿಲ್ಲೆಗೂ ಕರೆತಂದು ಇಲ್ಲಿನ ರೈತರೊಟ್ಟಿಗೆ ಸಮಾಲೋಚನೆ ನಡೆಸಿ ಅಗತ್ಯ ತಿಳಿವಳಿಕೆ ಕೊಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇಸ್ರೇಲ್ ಜಗತ್ತಿನಲ್ಲೇ ಪುಟ್ಟ ರಾಷ್ಟ್ರವಾಗಿದ್ದು, ಸುತ್ತಲೂ ಶತ್ರುಪಡೆಯನ್ನು ಎದುರಿಸಿಯೇ ಉತ್ತಮ ಆಡಳಿತ ನೀಡುತ್ತಿದೆ. ಅಲ್ಲಿನ ಕೃಷಿ ಪದ್ಧತಿ ಇಡೀ ಜಗತ್ತಿಗೇ ಮಾದರಿಯಾಗಿದೆ ಎಂದು ಅವರು ತಿಳಿಸಿದರು.







