ಕ್ರೀಡಾಪಟುಗಳ ಪ್ರತಿಭೆ ಅನಾವರಣಕ್ಕೆ ದಸರಾ ಕ್ರೀಡಾಕೂಟ ಉತ್ತಮ ವೇದಿಕೆ: ಶಾಸಕ ಬಿ.ವೈ ರಾಘವೇಂದ್ರ

ಶಿಕಾರಿಪುರ, ಸೆ.3: ಗ್ರಾಮೀಣ ಭಾಗದ ಪಾರಂಪರಿಕ ಕ್ರೀಡೆಗಳು ನಶಿಸುವ ಹಂತದಲ್ಲಿದ್ದು, ದಸರಾ ಕ್ರೀಡಾಕೂಟದಲ್ಲಿ ಯುವ ಕ್ರೀಡಾಪಟುಗಳು ಹೆಚ್ಚಾಗಿ ಪಾಲ್ಗೊಳ್ಳುವ ಮೂಲಕ ಕ್ರೀಡೆ ಅವಸಾನ ವಾಗದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಬಿ.ವೈ ರಾಘವೇಂದ್ರ ತಿಳಿಸಿದರು.
ರವಿವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರತಿಭೆಯನ್ನು ಗುರುತಿಸಲು ದಸರಾ ಕ್ರೀಡಾಕೂಟವನ್ನು ಮಹಾ ರಾಜರ ಕಾಲದಲ್ಲಿ ಆರಂಭಿಸಲಾಗಿದ್ದು, ಚಿಕ್ಕವಯಸ್ಸಿನಲ್ಲಿ ಕ್ರೀಡೆಯಲ್ಲಿ ಆಸಕ್ತಿಯನ್ನು ಹುಟ್ಟು ಹಾಕುವಲ್ಲಿ ದಸರಾ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದ ಅವರು, ರಾಜ್ಯ ರಾಷ್ಟ್ರ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾಧನೆಯನ್ನು ಮೆರೆದ ಹಲವು ಕ್ರೀಡಾಪಟುಗಳ ಪ್ರತಿಭೆಯ ಅನಾವರಣಕ್ಕೆ ದಸರಾ ಕ್ರೀಡಾಕೂಟ ಉತ್ತಮ ವೇದಿಕೆಯನ್ನು ಕಲ್ಪಿಸಿದೆ ಎಂದರು.
ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಮಹತ್ವವನ್ನು ಕಲ್ಪಿಸುವ ದಸರಾ ಕ್ರೀಡಾಕೂಟದಲ್ಲಿ ಯುವಪೀಳಿಗೆ ಸಕ್ರೀಯವಾಗಿ ಪಾಲ್ಗೊಂಡು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರತಿಭೆಯನ್ನು ಪ್ರದರ್ಶಿಸುವ ಜತೆಗೆ ಕ್ರೀಡೆಗಳು ಅವಸಾನವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಹಾಲಪ್ಪ, ಪುರಸಭಾ ಸದಸ್ಯ ನಾಗರಾಜಗೌಡ, ಮುಖಂಡ ಕೆ.ಪಿ ಮಂಜುನಾಥ, ಭಂಡಾರಿ ಮಾಲತೇಶ, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







