ಮಕ್ಕಳಿಗೆ ಮಹನೀಯರ ಜೀವನ ಚರಿತ್ರೆ ಓದಿಸುವ ಮೂಲಕ ಅವರನ್ನು ಸಾಧಿಸಲು ಪ್ರೇರೆಪಿಸಬೇಕು: ನ್ಯಾ.ಸಂಜೀವ್ ಕುಮಾರ್ .ವಿ

ತುಮಕೂರು, ಸೆ.3: ಭಾವಸಾರ ಕ್ಷತ್ರೀಯ ಸಂಘದ ವತಿಯಿಂದ ನಗರದ ಚಿಕ್ಕಪೇಟೆಯ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ 17ನೆ ವರ್ಷದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಉಚಿತ ಶಾಲಾ ಬ್ಯಾಗ್, ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಂಜೀವ್ ಕುಮಾರ್ ವಿ. ಹಂಜಾಟೆ ಮಾತನಾಡಿ, ಸಮಾಜ ಭಾಂಧವರು ವಿದ್ಯಾವಂತರಾಗಿ ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು. ಪೋಷಕರು ಮಕ್ಕಳಿಗೆ ಸಾಧನೆ ಮಾಡಿದ ಮಹನೀಯರ ಜೀವನ ಚರಿತ್ರೆಗಳನ್ನು ಓದಿಸುವ ಮೂಲಕ ಅವರು ಏನ್ನನಾದರೂ ಸಾಧಿಸಲು ಪ್ರೇರೆಪಿಸಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತ ಕೇಶವ ಜೀ ಝಿಂಗಾಡೆ ಮಾತನಾಡಿ, ಪತ್ರಿಕಾ ರಂಗ ಇಂದು ವಿಶ್ವವಿದ್ಯಾನಿಲಯವಾಗಿ ಪರಿವರ್ತನೆಗೊಂಡಿದೆ. ಪತ್ರಿಕೆಗಳಲ್ಲಿ ಇಂದು ಎಲ್ಲಾ ವಿಚಾರಗಳು ಚರ್ಚೆಯಾಗುತ್ತಿದ್ದು, ಸಾಹಿತ್ಯ, ವಿಜ್ಞಾನ, ಕಲೆ,ರಾಜಕೀಯ, ಸಾಮಾಜಿಕ ಹಾಗೂ ಪ್ರಸ್ತುತ ಪರಿಸ್ಥಿತಿಯ ವಿಚಾರವಾಗಿ ಅನೇಕ ಲೇಖನಗಳು ಪ್ರಕಟಗೊಳ್ಳುತ್ತಿದ್ದು, ಮಕ್ಕಳಲ್ಲಿ ಪತ್ರಿಕೆ ಓದುವ ಹವ್ಯಾಸ ಬೆಳೆಸುವ ಮೂಲಕ ಅವರನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಹಣಿಗೊಳಿಸಬೇಕೆಂದು ಕೆರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಆರ್.ರಮಾನಂದ ಬೊಂಬೊರೆ ಮಾತನಾಡಿ, ಸಮಾಜ ತುಂಬಾ ಮುಂದುವರೆದಿದೆ. ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಕಷ್ಟು ಸಾಧನೆ ಮಾಡುತ್ತಿದ್ದು, ಅರಿವಿನ ಕೊರತೆಯಿಂದ ಸ್ಪರ್ಧಾತ್ಮಕ ಲೋಕದಲ್ಲಿ ಅವಕಾಶ ಗಿಟಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.ಸಂಘದವತಿಯಿಂದ ಪ್ರತಿಭಾವಂತ ಮಕ್ಕಳಿಗೆ ವೇದಿಕೆ ಕಲ್ಪಿಸುವ ಕೆಲಸ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಬಿ.ರಾಘವೇಂದ್ರ ಕುಂಠೆ, ಕಳೆದ 17 ವರ್ಷಗಳಿಂದ ಸಂಘ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮ ಏರ್ಪಡಿಸುವ ಮೂಲಕ ಮಕ್ಕಳನ್ನು ಹಾಗೂ ಹಿರಿಯರನ್ನು ಪ್ರೋತ್ಸಾಹಿಸಲಾಗುತ್ತಿದೆ. ಎಲ್ಲರ ಒಗ್ಗಟ್ಟಿನಿಂದ ಈ ಕಾರ್ಯ ಸುಸೂತ್ರವಾಗಿ ನಡೆಯುತ್ತಿದ್ದು, ಮುಂದೆಯೂ ಸಂಘದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ, ಸಂಘದ ಯಶಸ್ಸಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಟಿ.ವಿ.ಶ್ರೀನಿವಾಸ್ ಟೆಂಕರ್, ಪ್ರಧಾನಕಾರ್ಯದರ್ಶಿ ವಿಠಲ್ ರಾವ್ ಅಂಬೇಕರ್, ಉಪಾಧ್ಯಕ್ಷರಾದ ವಿ.ಪಿ.ನಟೇಶ್ ವರ್ಣೇ,ಎಲ್.ಮಂಜುನಾಥ್ ಉತ್ತರ್‍ಕರ್,ಸಹಕಾರ್ಯದರ್ಶಿ ಎ.ಎನ್.ಸುರೇಂದ್ರ ಆವಂತರಕರ್, ಖಚಾಂಚಿ ಜಿ.ಕೆ.ಮಧುಕರ್ ಕುಂಠೆ, ಬಿ.ಎನ್.ಕೃಪಾಶಂಕರ್ ಬಾಂಬೊರೆ, ರಘುಪ್ರಸಾದ್ ಕಲೋಸೆ ಮತ್ತಿತರರು ಉಪಸ್ಥಿತರಿದ್ದರು.







