ಕುದ್ಮುಲ್ ರಂಗರಾವ್ ಸಮಾಜದ ಕಟ್ಟ ಕಡೆಯ ಜನರ ಬಾಳಿನಲ್ಲಿ ಬೆಳಕಾದ ಮಹಾಮನವತಾವಾದಿ: ಡಾ.ಎಂ.ಆರ್.ಕೇಶವ ಧರಣಿ

ಮಂಗಳೂರು, ಸೆ.3: ಸಮಾಜದ ಕಟ್ಟ ಕಡೆಯ ಜನರ ಬಾಳಿನಲ್ಲಿ ಬೆಳಕಾದ ಮಹಾ ಮನವತಾವಾದಿ ಕುದ್ಮುಲ್ ರಂಗರಾವ್ ಆಗಿದ್ದರು ಎಂದು ಕುದ್ಮುಲ್ ರಂಗರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಕೇಶವ ಧರಣಿ ತಿಳಿಸಿದ್ದಾರೆ.
ಅವರು ನಗರದ ಎನ್‌ಜಿಒ ಸಭಾಂಗಣದಲ್ಲಿಂದು ಮಾನವ ಬಂಧುತ್ವ ವೇದಿಕೆಯ ವತಿಯಿಂದ ಹಮ್ಮಿಕೊಂಡ ಕುದ್ಮುಲ್ ರಂಗರಾವ್ ಜಯಂತಿಯ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು.
ಅಸ್ಪಶ್ಯರಾಗಿದ್ದ ದಲಿತರಿಗೆ ಅನ್ನ, ಉದ್ಯೋಗ, ಶಿಕ್ಷಣ ಕೊಟ್ಟ ಕುದ್ಮುಲ್ ರಂಗರಾವ್ ದಲಿತರು ನಿತ್ಯ ಸ್ಮರಿಸುವ ಮನೆ ದೇವರ ಸ್ಥಾನದಲ್ಲಿಡಬೇಕಾಗಿದೆ. ಅಂಬೇಡ್ಕರರಿಗಿಂತ ಮೊದಲೇ ದಲಿತರ ಬಗ್ಗೆ ಚಿಂತಿಸಿ ದ.ಕ ಜಿಲ್ಲೆಯಲ್ಲಿ ಕಾರ್ಯಪ್ರವೃತ್ತರಾದ ಕುದ್ಮುಲ್ ದಲಿತರ ಶಿಕ್ಷಣ, ಆಶ್ರಮ ಶಾಲೆಗಳನ್ನು ತೆರೆದರು. ಗಾಂಧೀಜಿಯೂ ಕುದ್ಮುಲ್ ರಂಗರಾವ್ ಅವರನ್ನು ಗುರುವಿನ ಸ್ಥಾನದಲ್ಲಿ ಕಂಡರು. ದಲಿತನೊಬ್ಬ ಸರಕಾರದ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಕನಸು ಕಂಡ ಮಹಾನ್ ಸಮಾಜ ಸುಧಾರಕ ಕುದ್ಮುಲ್ ರಂಗರಾವ್. ಅವರು ದೇಶಕ್ಕೆ ಮಾತ್ರವಲ್ಲ ತಮ್ಮ ಕುಂಟಂಬದ ಸದಸ್ಯರಲ್ಲೂ ದಲಿತರ ಬಗ್ಗೆ ಕಾಳಜಿ ವಹಿಸುವಂತೆ ಪ್ರಭಾವ ಬೀರುವಲ್ಲಿ ಸಫಲರಾದರು. ಅದರ ಫಲವಾಗಿ ತಮ್ಮ ಅಳಿಯ ಮದ್ರಾಸ್ ಸರಕಾರದಲ್ಲಿ ಪ್ರಮುಖ ಸ್ಥಾನಕ್ಕೆ ಏರಿದಾಗ ದಲಿತರಿಗೆ ಮೀಸಲಾತಿಯನ್ನು ಹೆಚ್ಚಿಸಲು ಪರೋಕ್ಷವಾಗಿ ಕುದ್ಮುಲ್‌ರ ಸಲಹೆ, ಮಾರ್ಗದರ್ಶನ ಕಾರಣವಾಯಿತು. ಆದರೆ ಸ್ವಾತಂತ್ರ ಬಂದ ಇಷ್ಟು ವರ್ಷಗಳಾದರೂ ದೆಹಲಿಯ ಕೆಂಪು ಕೋಟೆಯಲ್ಲಿ ದಲಿತರೊಬ್ಬರು ರಾಷ್ಟ್ರಧ್ವಜವನ್ನು ಅರಳಿಸಬೇಕು ಎನ್ನುವ ಕುದ್ಮುಲ್ ರಂಗರಾಯರ ಕನಸು ನನಸಾಗಲೇ ಇಲ್ಲ ಎಂದು ಕೇಶವ ಧರಣಿ ತಿಳಿಸಿದರು.
ಮಂಗಳೂರು ವಿ.ವಿ.ಯಲ್ಲಿ ಕುದ್ಮಲ್ ರಂಗರಾವ್ ಅಧ್ಯಯನ ಪೀಠ:- ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕುದ್ಮುಲ್ ರಂಗರಾವ್ ಅಧ್ಯಯನ ಪೀಠ ಆರಂಭಿಸಿ ಅವರ ಸಾಮಾಜಿಕ ಸುಧಾರಣೆಯ ಕೆಲಸಗಳ ಬಗ್ಗೆ ಇನ್ನಷ್ಟು ಜನರಿಗೆ ತಿಳಿಸಲು ಮತ್ತು ಹೆಚ್ಚಿನ ಅಧ್ಯಯನ ನಡೆಸಲು ಅನುಕೂಲವಾಗುತ್ತದೆ ಎಂದು ದಲಿತ ಮುಖಂಡ ದೇವದಾಸ್ ತಿಳಿಸಿದ್ದಾರೆ.
ಮನಪಾ ಮೇಯರ್ ಕವಿತಾ ಸನಿಲ್ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿ ಸೋಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಸಾಹಿತಿ ಬಿ.ಎಂ. ಇಚ್ಲಂಗೋಡ್, ಮನಪಾ ಸದಸ್ಯ ಪುರುಷೋತ್ತಮ ಚಿತ್ರಾಪುರ, ಪ್ರೊ.ಎಂ. ಎಸ್.ಕೋಟ್ಯಾನ್,ಉಪನ್ಯಾಸಕಿ ಡಾ.ಸಬಿತಾ, ಪಡಿ ನಿದೇಶಕ ರೆನ್ನಿ ಡಿ ಸೋಜ,ಮಾನವ ಬಂಧುತ್ವ ವೇದಿಕೆಯ ಸತೀಶ್ ಕುಮಾರ್, ನಾರಾಯಣ ಕಿಲಂಗೋಡಿ,ಗೋಪಾಲ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.







