ಸದ್ಯಕ್ಕಂತೂ 200 ರೂ. ನೋಟು ಎಟಿಎಂನಿಂದ ಹೊರಬರುವುದಿಲ್ಲ !

ಹೊಸದಿಲ್ಲಿ, ಸೆ. 3: ಆರ್‌ಬಿಐ 200 ರೂ. ನೋಟನ್ನು ಒಂದು ವಾರದ ಹಿಂದೆ ಚಲಾವಣೆಗೆ ತಂದಿತು. ಈ ನೋಟು ಗಾತ್ರದಲ್ಲಿ ವ್ಯತ್ಯಾಸ ಇರುವುದರಿಂದ ಎಟಿಎಂಗಳನ್ನು ಪುನರ್ ರೂಪಿಸುವ ಅತಿ ದೊಡ್ಡ ಕಾರ್ಯ ಇರುವುದರಿಂದ 200 ರೂ. ನೋಟನ್ನು ಎಟಿಎಂಗಳು ನೀಡಲು ಮೂರು ತಿಂಗಳು ಬೇಕಾಗಬಹುದು.
ಎಟಿಎಂಗಳನ್ನು ಮರು ರೂಪಿಸಲು ಹೊಸ ನೋಟುಗಳ ಪರೀಕ್ಷೆ ಆರಂಭಿಸುವಂತೆ ಕೆಲವು ಬ್ಯಾಂಕ್‌ಗಳು ಎಟಿಎಂ ಕಂಪೆನಿಗಳಲ್ಲಿ ಮನವಿ ಮಾಡಿವೆ. ಆದಾಗ್ಯೂ, ಬ್ಯಾಂಕ್‌ಗಳಿಗೆ ಇದುವರೆಗೆ ಹೊಸ ನೋಟುಗಳು ಪೂರೈಕೆಯಾಗಿಲ್ಲ.
ನವೆಂಬರ್‌ನಲ್ಲಿ ಅಧಿಕ ವೌಲ್ಯದ ನೋಟುಗಳನ್ನು ನಿಷೇಧಿಸಿದ ಬಳಿಕ ಎಟಿಎಂ ಯಂತ್ರಗಳನ್ನು ಮರು ರೂಪಿಸುವಲ್ಲಿ ಬ್ಯಾಂಕ್‌ಗಳು ಭಾಗಿಯಾಗಿದ್ದವು. 200 ರೂಪಾಯಿ ನೋಟುಗಳನ್ನು ಶೀಘ್ರದಲ್ಲಿ ಪೂರೈಸಲಾಗುವುದು ಎಂದು ಆರ್‌ಬಿಐ ಹೇಳಿದೆ. ಆದರೆ, ಆರ್‌ಬಿಐ ಯಾವುದೇ ಸಮಯ ನಿಗದಿ ಮಾಡಿಲ್ಲ.
200 ರೂ. ನೋಟುಗಳಿಗಾಗಿ ಎಟಿಎಂ ಯಂತ್ರಗಳನ್ನು ಮರು ರೂಪಿಸುವುದಕ್ಕೆ ಸಂಬಂಧಿಸಿ ಆರ್‌ಬಿಐಯಿಂದ ನಾವು ಯಾವುದೇ ನಿರ್ದೇಶನಗಳನ್ನು ಸ್ವೀಕರಿಸಿಲ್ಲ. ಆದರೆ, ಹೊಸ ನೋಟುಗಳನ್ನು ಎಟಿಎಂನಲ್ಲಿ ಪರಿಶೀಲಿಸಲು ಆರಂಭಿಸಿ ಎಂದು ಕೆಲವು ಬ್ಯಾಂಕ್‌ಗಳು ನಮಗೆ ಅನೌಪಚಾರಿಕವಾಗಿ ತಿಳಿಸಿವೆ ಎಂದು ಎಟಿಎಂ ಉತ್ಪಾದನಾ ಸಂಸ್ಥೆಗಳು ತಿಳಿಸಿವೆ.
ಹೊಸ 200 ನೋಟುಗಳನ್ನು ವಿತರಿಸಲು ದೇಶಾದ್ಯಂತ ಇರುವ 2.25 ಲಕ್ಷ ಎಟಿಎಂ ಯಂತ್ರಗಳನ್ನು ಮರು ರೂಪಿಸಬೇಕೆ ಎಂಬ ಬಗ್ಗೆ ಇನ್ನಷ್ಟೇ ಚಿಂತಿಸಬೇಕಾಗಿದೆ ಎಂದು ಅವು ಹೇಳಿವೆ.
ಬಾಕ್ಸ್ ಆರ್‌ಬಿಐಯಿಂದ ನಿರ್ದೇಶನ ದೊರಕಿದ ಕೂಡಲೇ ಎಟಿಎಂ ಮರು ರೂಪಿಸುವ ಕೆಲಸವನ್ನು ನಾವು ಆರಂಭಿಸಲಿದ್ದೇವೆ. ಹೊಸ ನೋಟಿನ ಗಾತ್ರ ಈಗಿರುವ ನೋಟುಗಳಿಗಿಂತ ಭಿನ್ನವಾಗಿದೆ. ಒಮ್ಮೆ ನಾವು ನೋಟುಗಳನ್ನು ಸ್ವೀಕರಿಸಿದರೆ, ನಮಗೆ ಅದರ ಗಾತ್ರ ಅರಿವಾಗಬಹುದು. ಅದಕ್ಕೆ ಅನುಗುಣವಾಗಿ ಎಟಿಎಂ ಕೆಸೆಟ್‌ಗಳನ್ನು ಮರು ರೂಪಿಸಬಹುದು ಎಂದು ದೇಶದಲ್ಲಿ 60 ಸಾವಿರ ಎಟಿಎಂಗಳನ್ನು ಸ್ಥಾಪಿಸಿರುವ ಎಜಿಎ ಟ್ರಾನ್ಸಾಕ್ಟ್ ಟೆಕ್ನಾಲಜಿ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರವಿ ಬಿ. ಗೋಯಲ್ ಹೇಳಿದ್ದಾರೆ.







