ವಿದ್ಯಾರ್ಥಿಗಳು ಭ್ರಷ್ಟಾಚಾರ-ಜಾತೀಯತೆಗೆ ಜೋತು ಬೀಳಬಾರದು: ನಿವೃತ್ತ ನ್ಯಾ.ಅರಳಿ ನಾಗರಾಜ್
ಬೆಂಗಳೂರು, ಸೆ. 3: ವಿದ್ಯಾರ್ಥಿಗಳು ಭ್ರಷ್ಟಾಚಾರ, ಜಾತೀಯತೆಗೆ ಜೋತುಬಿದ್ದು ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ರವಿವಾರ ನಗರದ ಕಾಸಿಯಾ ಸಭಾಂಗಣದಲ್ಲಿ ಬಿ.ಸೋಮಣ್ಣ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಭ್ರಷ್ಟಾ ಮತ್ತು ಜಾತಿರಹಿತ ದೇಶವನ್ನು ಕಟ್ಟಲು ಮುಂದಾಗಬೇಕು. ಬದಲಾವಣೆ ಮಾಡುವ ಚೈತನ್ಯ ವಿದ್ಯಾರ್ಥಿಗಳಿದೆ. ಆದರೆ ಸಮಾಜದಲ್ಲಿ ಪಟ್ಟಬದ್ಧ ಹಿತಾಸಕ್ತಿಗಳ ಒತ್ತಡಕ್ಕೆ ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬದುಕು ಹೊಸ ಅನುಭವವನ್ನು ಕಲಿಸುತ್ತದೆ. ಕಲಿಕೆ ಎಂಬುದು ನಿಂತ ನೀರಲ್ಲ. ಅದೊಂದು ಚಲನಕ್ರಿಯೆ. ಕಲಿಯುವ ಆಸಕ್ತಿಯನ್ನು ವಿದ್ಯಾರ್ಥಿಗಳು ಮೈಗೂಡಿಸಕೊಳ್ಳಬೇಕು. ಸಮಾಜ ಪಿಡುಗುಗಳಾದ ಭ್ರಷ್ಟಾಚಾರ ಮತ್ತು ಜಾತಿಯತೆಗೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕಟಿಬೀಳಬಾರದು ಎಂದರು.
ನಾನು ಹೆಚ್ಚಿನ ಅಂಕಗಳಿಸಿದವನಲ್ಲ. ನೀವು ಹೆಚ್ಚು ಅಂಕ ಪಡೆದಿರುವುದಕ್ಕೆ ಸಂತೋಷವಾಗುತ್ತಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಇರಬೇಕು. ಅವಕಾಶಗಳು ಬಂದಾಗ ಸದುಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ವಿದ್ಯಾರ್ಥಿಗಳು ಬುದ್ಧ, ಬಸವ, ಗಾಂಧಿ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು. ಸಮಾಜದ ಪರಿವರ್ತನೆ ತರಲು ಯುವರು ಕೈ ಜೋಡಿಸಬೇಕು ಎಂದರು.
ಈ ವೇಳೆ ಎಸೆಸೆಲ್ಸಿ ಮತ್ತು ಪಿಯುಸಿ ಪಾಸಾದ 110 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ಪ್ರೋತ್ಸಾಹಧನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕವಿ ಡಾ.ಸಿದ್ದಲಿಂಗಯ್ಯ, ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕಿ ಡಾ.ತಮಿಳ್ ಸೆಲ್ವಿ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜ ಸೋಮಣ್ಣ ಸೇರಿದಂತೆ ಇತರರು ಇದ್ದರು.







