ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಉಮಾ ಗೈರು

ಹೊಸದಿಲ್ಲಿ, ಸೆ.3: ಕೇಂದ್ರ ಸಚಿವ ಸಂಪುಟ ಪುನಾರಚಿಸಲಾಗಿದ್ದು, ಉಮಾ ಭಾರತಿ ಅವರಿಗೆ ಈಗಿದ್ದ ಗಂಗಾ ಪುನರುಜ್ಜೀವನ ಹಾಗೂ ಜಲ ಸಂಪನ್ಮೂಲ ಖಾತೆಗೆ ಬದಲಾಗಿ ನೈರ್ಮಲ್ಯ ಹಾಗೂ ಕುಡಿಯುವ ನೀರು ಖಾತೆ ನೀಡಲಾಗಿದೆ.
ಗಂಗಾ ನದಿ ಶುದ್ಧೀಕರಣ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ. ಗಂಗಾ ನದಿಯ ಮಾಲಿನ್ಯ ನಿವಾರಿಸಲು ಹಾಗೂ ಪುನರುಜ್ಜೀವನಗೊಳಿಸಲು ಎರಡು ಕಾರ್ಯಕ್ರಮಗಳೊಂದಿಗೆ 20,000 ಕೋಟಿ ರೂ.ಗಳ ಯೋಜನೆ ಆರಂಭಿಸಲಾಗಿತ್ತು. ಆದರೆ, ನದಿ ತೀರದಲ್ಲಿರುವ ಮಾಲಿನ್ಯಕಾರಕ ಕೈಗಾರಿಕೆಗಳು ದೊಡ್ಡ ಸವಾಲಾಗಿತ್ತು. ಇದರೊಂದಿಗೆ ಈ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿತ್ತು.
ಎರಡು ದಿನಗಳ ಹಿಂದೆ ರಾಜೀನಾಮೆ ವರದಿ ಬಗ್ಗೆ ಉಮಾ ಭಾರತಿ ಅವರಲ್ಲಿ ಪ್ರಶ್ನಿಸಲಾಗಿತ್ತು. ಆದರೆ, ಉಮಾ ಭಾರತಿ ಅವರು ಪತ್ರಕರ್ತರಿಗೆ ನಿಗೂಢವಾಗಿ ಉತ್ತರಿಸಿದ್ದರು. “ನಿಮ್ಮ ಪ್ರಶ್ನೆಗಳ ಬಗ್ಗೆ ನಾನು ಕಿವುಡಿ. ಅಮಿತ್ ಶಾ ಅವರಲ್ಲಿ ಕೇಳಿ. ಅವರು ಮಾತ್ರ ಈ ಪ್ರಶ್ನೆಗೆ ಉತ್ತರಿಸಬಹುದು” ಎಂದು ಹೇಳಿದ್ದರು.
ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ ಆಯೋಜಿಸಲಾಗಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಮಾ ಭಾರತಿ ಅವರು ಪಾಲ್ಗೊಂಡಿರಲಿಲ್ಲ. ಉಮಾಭಾರತಿ ತಮ್ಮ ಕ್ಷೇತ್ರ ಝಾನ್ಸಿಯ ಒಂದು ಭಾಗವಾದ ಲಲಿತ್‌ಪುರದಲ್ಲಿ ಇದ್ದರು. ಅನಂತರ ಇಲ್ಲಿನ ಕಾರ್ಯಕ್ರಮ ಮುಗಿಸಿದ ಬಳಿಕ ಪ್ರಮಾಣ ವಚನ ಸಮಾರಂಭಕ್ಕೆ ಹೋಗಲಿದ್ದೇನೆ ಎಂದು ಟ್ವೀಟ್ ಮಾಡಿದ್ದರು.







