ಕ್ಷೌರ ನಿರಾಕರಣೆ ಪ್ರಕರಣ: ವಳೆಗೆರೆಹಳ್ಳಿಗೆ ಎಸ್ಟಿ, ಎಸ್ಟಿ ಆಯೋಗದ ಅಧ್ಯಕ್ಷರ ಭೇಟಿ

ಮದ್ದೂರು, ಸೆ.3: ಸಮೀಪದ ವಳಗೆರೆಹಳ್ಳಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿರಾಕರಣೆ ಸಂಬಂಧ ಉಂಟಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ರಾಜ್ಯ ಎಸ್ಟಿ, ಎಸ್ಸಿ ಆಯೋಗದ ಅಧ್ಯಕ್ಷ ಮುನಿಯಪ್ಪ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಲಿತ ಭಾನುಪ್ರಕಾಶ್ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದ ಅವರು, ನಂತರ, ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗು ಗ್ರಾಮಸ್ಥರನ್ನೂ ಭೇಟಿಯಾಗಿ ಮಾಹಿತಿಯನ್ನು ಕಲೆ ಹಾಕಿದರು.
ವಿ.ಎಸ್.ಭಾನುಪ್ರಕಾಶ್, ತಾಯಿ ನಿರ್ಮಲಾ, ತಂದೆ ಸಾಕಯ್ಯ ಅವರು ಸವರ್ಣೀಯರು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ನಮ್ಮಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ನಾವು ಊರು ಬಿಡುತ್ತೇವೆ. ಬೇರೆ ಕಡೆ ಜಾಗ ಕೊಡಿ. ಊರಿನಲ್ಲಿ ನಮಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಅಧ್ಯಕ್ಷರಲ್ಲಿ ಬೇಡಿಕೊಂಡರು.
ನಮ್ಮ ಊರಿನಲ್ಲಿ ಯಾವುದೇ ಅಸ್ಪೃಶ್ಯತಾ ಆಚರಣೆ ಇಲ್ಲ. ಕ್ಷೌರ ವಿಚಾರದಲ್ಲಿ ಭಾನು ಪ್ರಕಾಶ್ ಸುಮ್ಮನೆ ವಿವಾದ ಸೃಷ್ಟಿಸಿದ್ದಾರೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಕೆ.ಶ್ರೀನಿವಾಸಕುಮಾರ್ ಅಧ್ಯಕ್ಷರಿಗೆ ನಿವೇದಿಸಿದರು.
ಕ್ಷೌರಿಕ ಶ್ರೀನಿವಾಸ್ ಅವರಿಗೆ ಪ್ರತ್ಯೇಕವಾಗಿ ಅಂಗಡಿ ಇಡಲು ಗ್ರಾಮಪಂಚಾಯತ್‍ಗೆ ಸೇರಿದ ನಿವೇಶನವನ್ನು ನೀಡಲು ನಿರ್ಣಯ ಕೈಗೊಂಡಿದ್ದೇವೆ. ಸದರಿ ನಿವೇಶನದಲ್ಲಿ ಭಾನುಪ್ರಕಾಶ್ ಕುಟುಂಬ ವಾಸವಾಗಿಲ್ಲ. ಹೀಗಾಗಿ ಇದನ್ನು ತೆರವುಗೊಳಿಸಿ ಅಲ್ಲಿ ಕ್ಷೌರದಂಗಡಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ವಿಚಾರದಲ್ಲಿ ನಾವು ಯಾವುದೇ ಬಗೆಯ ಅಸ್ಪೃಶ್ಯತಾ ತಾ ಆಚರಣೆ ಮಾಡಿಲ್ಲ ಎಂದು ಅವರು ವಿವರ ನೀಡಿದರು.
ಇದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಭಾನುಪ್ರಕಾಶ್ ಸಹೋದರ ಶೇಖರ್ ಮಾತನಾಡಿ, ವಳಗೆರೆಹಳ್ಳಿಯಲ್ಲಿ ಯಾವುದೇ ಬಗೆಯ ಅಸ್ಪೃಶ್ಯತಾ ಆಚರಣೆ ನಡೆದಿಲ್ಲ. ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದೇವೆ. ನನ್ನ ಸಹೋದರ ಭಾನುಪ್ರಕಾಶ್ ಪ್ರತಿಷ್ಠೆಗಾಗಿ ವಿವಾದ ಸೃಷ್ಟಿಸಿದ್ದು, ಇದಕ್ಕೆ ಮಾನ್ಯತೆ ನೀಡಬಾರದು ಎಂದು ಅಧ್ಯಕ್ಷರಿಗೆ ವಿನಂತಿಸಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಿ.ಮಾಲತಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಚಂದ್ರ, ಡಿವೈಎಸ್ಪಿ ಮಲ್ಲಿಕ್, ಸಿಪಿಐ ಕೆ.ಪ್ರಭಾಕರ್, ಪಿಎಸ್ಸೈ ಕುಮಾರ್, ಇತರ ಮುಖಂಡರು ಹಾಜರಿದ್ದರು.
ಅಗತ್ಯ ಕ್ರಮಕ್ಕೆ ಸೂಚನೆ: ನಂತರ ಮದ್ದೂರಿನ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳು ಮತ್ತು ದಲಿತ ಮುಖಂಡರ ಸಭೆ ನಡೆಸಿದ ಆಯೋಗದ ಅಧ್ಯಕ್ಷ ಮುನಿಯಪ್ಪ ವಳೆಗೆರೆಹಳ್ಳಿ ದಲಿತನ ಮೇಲಿನ ದೌರ್ಜನ್ಯ ಸಂಬಂಧ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ವಳಗೆರೆಹಳ್ಳಿಯಲ್ಲಿ ಅಸ್ಪೃಶ್ಯತಾ ಆಚರಣೆಯನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ. ಹೀಗಾಗಿ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಪಂ ಪಿಡಿಒ ರೂಪೇಶ್ ಕುಮಾರ್ ಈ ವಿಚಾರದಲ್ಲಿ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅವರ ಮೇಲೆ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡುವಂತೆ ಅವರು ತಹಶೀಲ್ದಾರ್ ಹರ್ಷ ಅವರಿಗೆ ಸೂಚನೆ ನಿಡಿದರು.
ಅಸೃಶ್ಯತೆ ಆಚರಣೆಯಿಂದ ನೊಂದ ಭಾನುಪ್ರಕಾಶ್ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳದಲ್ಲಿ ಹಾಜರಿದ್ದ ಸಮಾಜ ಕಲ್ಯಾಣಾಧಿಕಾರಿ ಮಾಲತಿ ಅವರಿಗೆ ಅವರು ತಾಕೀತು ಮಾಡಿದರು.
ಬಿಎಸ್ಪಿ ಮುಖಂಡ ಎಂ.ಕೃಷ್ಣಮೂರ್ತಿ, ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ, ಮೆಹರ್ ಯುವಸೇನೆ ಅಧ್ಯಕ್ಷ ಶಿವರಾಜು, ದಲಿತ ಮುಖಂಡರಾದ ಕೃಷ್ಣ, ಹನುಮೇಶ್, ಹುಲಿಗೆರೆಪುರ ಮಹದೇವು, ಚಂದ್ರಶೇಖರ್, ಇತರರು ಉಪಸ್ಥಿತರಿದ್ದರು.







