ಹೊರಗಿನವರಿಗೆ ಮಣೆ ಹಾಕದಂತೆ ಕಾಂಗ್ರೆಸ್ ಮುಖಂಡರ ಒತ್ತಾಯ
ಮಹದೇವಪುರ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್

ಬೆಂಗಳೂರು, ಸೆ.3: ಮಹದೇವಪುರ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಸ್ಥಳೀಯ ನಾಯಕರು ಒಟ್ಟಾಗತೊಡಗಿದ್ದು ಶತಾಯಗತಾಯ ಈ ಬಾರಿ ಹೊರಗಿನವರಿಗೆ ಅವಕಾಶ ನೀಡದಂತೆ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ಮೇಲೆ ಒತ್ತಡ ಹೇರಲು ನಿರ್ಣಯ ಕೈಗೊಂಡಿದ್ದಾರೆ.
ನಗರದ ಹೊರವಲಯದಲ್ಲಿರುವ ಪಣತ್ತೂರು ಬಳಿಯ ಖಾಸಗಿ ಹೊಟೇಲ್‌ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹೂಡಿ ಗೋಪಾಲರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಿದ 200ಕ್ಕೂ ಹೆಚ್ಚು ಮುಖಂಡರು, ಸ್ಥಳೀಯ ಅಭ್ಯರ್ಥಿಗಳನ್ನು ಕಡೆಗಣಿಸಿ ಹೊರಗಿನಿಂದ ಬಂದವರಿಗೆ ಮಣೆ ಹಾಕಿದ್ದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಕ್ಷೀಣಿಸಿ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ನಾಯಕರು ರಾಜಕೀಯ ಅಜ್ಞಾತವಾಸ ಅನುಭವಿಸುವಂತಾಗಿದೆ. ಆದುದರಿಂದ, ಈ ಬಾರಿ ಯಾವುದೆ ಕಾರಣಕ್ಕೂ ಕ್ಷೇತ್ರದ ಹೊರಗಿನ ವ್ಯಕ್ತಿಗೆ ಟಿಕೆಟ್ ಸಿಗದಂತೆ ತಡೆಯಬೇಕೆಂಬ ಸರ್ವಾನುಮತದ ನಿರ್ಣಯ ಕೈಗೊಂಡಿದ್ದಾರೆ.
2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡೆ ಪ್ರಕ್ರಿಯೆಯಿಂದಾಗಿ ವರ್ತೂರು ವಿಧಾನಸಭಾ ಕ್ಷೇತ್ರವು ವಿಭಜನೆಗೊಂಡು ಮಹದೇವಪುರ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ಸತತ ಆರು ಬಾರಿ ವರ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಆದರೆ, ಸ್ಥಳೀಯ ನಾಯಕರು, ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ 2008 ಹಾಗೂ 2013ರಲ್ಲಿ ಹೊರಗಿನವರಿಗೆ ಟಿಕೆಟ್ ಹಂಚಿಕೆ ಮಾಡಿದ್ದರಿಂದ ಹೊಸ ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲಕಚ್ಚುವಂತಾಯಿತು ಎಂಬುದು ಸ್ಥಳೀಯ ಮುಖಂಡರ ಭಾವನೆಯಾಗಿದೆ.
ಮುಖಂಡರ ಸಭೆಯಲ್ಲಿ ಕೈಗೊಂಡ ತೀರ್ಮಾನವನ್ನು ಕೆಪಿಸಿಸಿ ಅಧ್ಯಕ್ಷರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಮುಖ್ಯಮಂತ್ರಿಯ ಗಮನ ಸೆಳೆದು, ಪಕ್ಷದ ಆಂತರಿಕ ಮಟ್ಟದಲ್ಲೆ ಬಿ ಫಾರಂಗಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಮಹದೇವಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎ.ಸಿ.ಶ್ರೀನಿವಾಸ್, ಬೇರೆ ಕ್ಷೇತ್ರದವರಾಗಿದ್ದರೂ ಪಕ್ಷದ ಹಿತದೃಷ್ಟಿಯಿಂದ ಅವರಿಗೆ ಬೆಂಬಲ ನೀಡಲಾಗಿತ್ತು. ಕಳೆದ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಲ್ಲಿ ಅವರು ಸೋಲು ಅನುಭವಿಸಿದರು. ಆದರೆ, ನಂತರದ ದಿನಗಳಲ್ಲಿ ಪಕ್ಷದ ಮೂಲ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿಸಿ, ಬಿಜೆಪಿಯಿಂದ ಬಂದವರಿಗೆ ಮಣೆ ಹಾಕುತ್ತಿರುವುದಲ್ಲದೆ, ಪಕ್ಷದ ಪದಾಧಿಕಾರಿಗಳನ್ನಾಗಿ ನೇಮಿಸಿದ್ದಾರೆ ಎಂಬ ಆಕ್ರೋಶ ಮುಖಂಡರಲ್ಲಿದೆ.
ಸಭೆಯಲ್ಲಿ ಮುಖಂಡರಾದ ಪಣತ್ತೂರು ನಾಗರಾಜ್, ಯಮಲೂರು ಜಯಪ್ರಕಾಶ್, ಗುಂಡೂರು ಎಚ್.ಕೃಷ್ಣಪ್ಪ, ವಾಸುದೇವರೆಡ್ಡಿ ಸೇರಿದಂತೆ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.







