ಅಮೆರಿಕದಲ್ಲಿ ಸಿಖ್ಖ್ ವಿದ್ಯಾರ್ಥಿಯ ಹತ್ಯೆ
ವಿವಿಯಲ್ಲಿ ಸೀಟು ದೊರೆಯದ ಹತಾಶ ಅಮೆರಿಕನ್ ವಿದ್ಯಾರ್ಥಿಯ ಪಾತಕಕೃತ್ಯ

ವಾಶಿಂಗ್ಟನ್,ಸೆ.2: ಅಮೆರಿಕದಲ್ಲಿ ಉಲ್ಬಣಿಸಿರುವ ಜನಾಂಗೀಯ ದ್ವೇಷದ ಹೊಸ ಘಟನೆಯೊಂದರಲ್ಲಿ ಅಮೆರಿಕನ್ ವಿದ್ಯಾರ್ಥಿಯೊಬ್ಬ 22 ವರ್ಷದ ಸಿಖ್ಖ್ ಸಾಫ್ಟ್‌ವೇರ್ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಇರಿದು ಸಾಯಿಸಿದ್ದಾನೆ. ಹಂತಕ ಅಮೆರಿಕನ್ ವಿದ್ಯಾರ್ಥಿಯು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದಿದ್ದಕ್ಕಾಗಿ ಹತಾಶನಾಗಿದ್ದನೆಂದು ಮಾಧ್ಯಮ ವರದಿಗಳು ತಿಳಿಸಿವೆ.
ಮೂರನೆ ವರ್ಷದ ಸಾಫ್ಟ್‌ವೇರ್ ವಿದ್ಯಾರ್ಥಿಯಾದ ಗಗನ್‌ದೀಪ್ ಸಿಂಗ್, ಟ್ಯಾಕ್ಸಿ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ. ಆರೋಪಿ, 19 ವರ್ಷದ ಅಮೆರಿಕನ್ ವಿದ್ಯಾರ್ಥಿಯು ವಾಶಿಂಗ್ಟನ್ ರಾಜ್ಯದ ಸ್ಪೊಕೇನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಗನ್‌ದೀಪ್‌ಸಿಂಗ್‌ನ ಕಾರನ್ನು ಬಾಡಿಗೆ ಗೊತ್ತು ಮಾಡಿಕೊಂಡಿದ್ದ. ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆತ ಗಗನ್‌ದೀಪ್‌ನನ್ನು ಚೂರಿಯಿಂದ ಇರಿದು ಹತ್ಯೆಗೈದಿರುವುದಾಗಿ ಕೆಎಚ್‌ಕ್ಯೂ ಸುದ್ದಿಸಂಸ್ಥೆ ವರದಿ ಮಾಡಿದೆ.
ಆರೋಪಿ ವಿದ್ಯಾರ್ಥಿಯನ್ನು ಜಾಕೊಬ್ ಕೊಲ್‌ಮ್ಯಾನ್ ಎಂದು ಗುರುತಿಸ ಲಾಗಿದೆಯೆಂದು ಬೊನ್ನರ್ ಕೌಂಟಿಯ ಪೊಲೀಸ್ ಅಧಿಕಾರಿಯ ಕಾರ್ಯಾಲಯ ತಿಳಿಸಿದೆ.
ಸಿಯಾಟಲ್ ನಿವಾಸಿಯಾದ ಕೊಲ್‌ಮ್ಯಾನ್ ಸ್ಪೊಕೇನ್‌ನ ಗೊಂಝಾಗಾ ವಿವಿಯಲ್ಲಿ ಪ್ರವೇಶ ಕೋರಿ ಸಂದರ್ಶನಕ್ಕೆ ಆಗಮಿಸಿದ್ದ. ಆದರೆ ಅಲ್ಲಿ ಆತನಿಗೆ ಪ್ರವೇಶ ನಿರಾಕರಿಸಿದ್ದರಿಂದ ಆತ ರೊಚ್ಚಿಗೆದ್ದಿದ್ದನೆಂದು ಪೊಲೀಸ್ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕದಲ್ಲಿ ಸಿಖ್ಖರು ಸೇರಿದಂತೆ ಭಾರತೀಯ ಮೂಲದ ಅಮೆರಿಕನ್ನರ ವಿರುದ್ಧ ಜನಾಂಗೀಯ ದ್ವೇಷದ ದಾಳಿಯ ಹಲವು ಘಟನೆಗಳು ವರದಿಯಾಗಿವೆ. ಜುಲೈನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಸಿಖ್ಖ್ ಅಮೆರಿಕನ್ನರು ಹತ್ಯೆಯಾಗಿದ್ದರು.
ಮಾರ್ಚ್‌ನಲ್ಲಿ ವಾಶಿಂಗ್ಟನ್ ರಾಜ್ಯದ ಕೆಂಟ್ ಎಂಬಲ್ಲಿ 39 ವರ್ಷ ವಯಸ್ಸಿನ ಸಿಖ್ಖ್ ವ್ಯಕ್ತಿಯ ಮೇಲೆ ಮುಸುಕುಧರಿಸಿ ಬಂದೂಕುದಾರಿಯೊಬ್ಬ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಿದ್ದ.







