ನಡಾಲ್-ರೋಜರ್ ಫೆಡರರ್ ಪ್ರಿ-ಕ್ವಾರ್ಟರ್‌ಫೆನಲ್‌ಗೆ ಪ್ರವೇಶ
ಯುಎಸ್ ಓಪನ್

ನ್ಯೂಯಾರ್ಕ್, ಸೆ.3: ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಯುಎಸ್ ಓಪನ್ ಟೂರ್ನಿಯಲ್ಲಿ ನಾಲ್ಕನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಮೂರನೆ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ನಡಾಲ್ ಅರ್ಜೆಂಟೀನದ ಲಿಯೊನಾರ್ಡೊ ಮಯೆರ್‌ರನ್ನು 6-7(3/7), 6-3, 6-1, 6-4 ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ವಿಶ್ವದ ನಂ.59ನೆ ಆಟಗಾರನ ವಿರುದ್ಧ ಆಡಿರುವ ಎಲ್ಲ ನಾಲ್ಕು ಪಂದ್ಯಗಳನ್ನು ಜಯಿಸಿದ್ದಾರೆ.
ನಡಾಲ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್‌ರನ್ನು ಎದುರಿಸಲಿದ್ದಾರೆ. ಅಲೆಕ್ಸಾಂಡರ್ ವಿರುದ್ಧ ನಡಾಲ್ 6-2 ದಾಖಲೆ ಹೊಂದಿದ್ದಾರೆ.
ಇದೇ ವೇಳೆ, ಐದು ಬಾರಿಯ ಚಾಂಪಿಯನ್ ರೋಜರ್ ಫೆಡರರ್ 31ನೆ ಶ್ರೇಯಾಂಕದ ಫೆಲಿಸಿಯಾನೊ ಲೊಪೆಝ್ ವಿರುದ್ಧ 6-3, 6-3, 7-5 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಫೆಡರರ್ ನಾಲ್ಕನೆ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಫಿಲಿಪ್ ಕೊಹ್ಲ್ಸ್‌ಸ್ಕ್ರೈಬರ್‌ರನ್ನು ಎದುರಿಸಲಿದ್ದಾರೆ. 33ನೆ ಶ್ರೇಯಾಂಕದ ಫಿಲಿಪ್ ಆಸ್ಟ್ರೇಲಿಯದ ಜಾನ್ ಮಿಲ್ಮನ್‌ರನ್ನು 7-5, 6-2, 6-4 ಅಂತರದಿಂದ ಮಣಿಸಿದ್ದಾರೆ.
ಫೆಡರರ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಐದು ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದರು. ಶನಿವಾರ ನಡೆದಿದ್ದ ಮೂರನೆ ಸುತ್ತಿನಲ್ಲಿ ಲೊಪೆಝ್ ವಿರುದ್ಧ ಮೂರು ಸೆಟ್‌ಗಳಿಂದ ಜಯ ಸಾಧಿಸಿದ ಫೆಡರರ್ 16ನೆ ಬಾರಿ ನಾಲ್ಕನೆಸುತ್ತು ತಲುಪಿದ್ದಾರೆ.
ಆಸ್ಟ್ರೇಲಿಯದ ಡೊಮಿನಿಕ್ ಥೀಮ್ ಫ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊರನ್ನು 7-5, 6-4, 6-4 ಸೆಟ್‌ಗಳಿಂದ ಮಣಿಸುವ ಮೂಲಕ ನಾಲ್ಕು ವರ್ಷಗಳಲ್ಲಿ ಮೂರನೆ ಬಾರಿ ಅಂತಿಮ-16ರ ಸುತ್ತು ತಲುಪಿದ್ದಾರೆ. ಥೀಮ್ ಮುಂದಿನ ಸುತ್ತಿನಲ್ಲಿ 2009ರ ಚಾಂಪಿಯನ್ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಎದುರಿಸಲಿದ್ದಾರೆ.
ಡೆಲ್ ಪೊಟ್ರೊ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್‌ರನ್ನು 6-3, 6-3, 6-4 ಸೆಟ್‌ಗಳಿಂದ ಮಣಿಸಿದ್ದರು. ಬೋಸ್ನಿಯದ ಡಮಿರ್ ಝುಮ್‌ಹರ್‌ರನ್ನು 6-4, 6-4, 5-7, 6-4 ಸೆಟ್‌ಗಳ ಅಂತರದಿಂದ ಮಣಿಸಿದ ರಶ್ಯದ ಆ್ಯಂಡ್ರೆ ರುಬ್ಲೆವ್ ಅಂತಿಮ-16ರ ಸುತ್ತಿಗೆ ಲಗ್ಗೆ ಇಟ್ಟ ಎರಡನೆ ಕಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
19ರ ಹರೆಯದ ರುಬ್ಲೆವ್ ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ 9ನೆ ಶ್ರೇಯಾಂಕದ ಡೇವಿಡ್ ಗಫಿನ್‌ರನ್ನು ಎದುರಿಸಲಿದ್ದಾರೆ. 2016ರ ಸೆಮಿಫೈನಲಿಸ್ಟ್ ಗೇಲ್ ಮೊನ್‌ಫಿಲ್ಸ್ ಮಂಡಿನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಹಿನ್ನೆಲೆಯಲ್ಲಿ ಗಫಿನ್ ಅಂತಿಮ-16ರ ಸುತ್ತು ತಲುಪಿದ್ದಾರೆ.
ಅಂಪೈರ್‌ನ್ನು ನಿಂದಿಸಿದ ಫೋಗ್ನಿನಿ ಟೂರ್ನಿಯಿಂದ ಅಮಾನತು ಮೂರು ದಿನಗಳ ಹಿಂದೆ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದ ವೇಳೆ ಸ್ವೀಡನ್‌ನ ಮಹಿಳಾ ಅಂಪೈರ್ ಲೌಸಿ ಇಂಗ್‌ಝೆಲ್‌ರನ್ನು ಅವಾಚ್ಯವಾಗಿ ನಿಂದಿಸಿದ್ದ ಇಟಲಿಯ ಆಟಗಾರ ಫ್ಯಾಬಿಯೊ ಫೋಗ್ನಿನಿ ಅವರನ್ನು ಗ್ರಾನ್‌ಸ್ಲಾಮ್ ಮಂಡಳಿಯು ಕೊನೆಗೂ ಟೂರ್ನಿಯಿಂದ ಅಮಾನತುಗೊಳಿಸಿದೆ.
ವಿಶ್ವದ ನಂ.26ನೆ ಆಟಗಾರ ಫೋಗ್ನಿನಿ ಸಹ ಆಟಗಾರ ಸೈಮನ್ ಬೊಲೆಲಿ ಅವರೊಂದಿಗೆ ಪುರುಷರ ಡಬಲ್ಸ್ ನಲ್ಲಿ ಮೂರನೆ ಸುತ್ತಿಗೆ ತಲುಪಿದ್ದರು. ಆದರೆ, ಅಂಪೈರ್‌ಗೆ ನಿಂದಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಫೋಗ್ನಿನಿಗೆ ಟೂರ್ನಿಯಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಿದ್ದಲ್ಲದೆ 24,000 ಡಾಲರ್ ದಂಡವನ್ನು ವಿಧಿಸಲಾಗಿದೆ.
‘‘ಟೂರ್ನಿಯ ಆಯೋಜಕರು ಫೋಗ್ನಿನಿ ವಿರುದ್ಧ ವಿಳಂಬವಾಗಿ ಕ್ರಮ ತೆಗೆದುಕೊಂಡಿದ್ದಾರೆ. ಅಂಪೈರ್ ನಿಂದಿಸಿದ ಬಳಿಕ ಪುರುಷರ ಡಬಲ್ಸ್‌ನಲ್ಲಿ 2 ಪಂದ್ಯಗಳನ್ನು ಆಡಲು ಅವಕಾಶ ನೀಡಬಾರದಿತ್ತು. ಫೋಗ್ನಿನಿ ವರ್ತನೆ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿತ್ತು’’ ಎಂದು ನಡಾಲ್ ಹೇಳಿದ್ದಾರೆ.
ಪ್ಲಿಸ್ಕೋವಾ, ಸ್ವಿಟೋಲಿನಾ ಅಂತಿಮ-16ರ ಸುತ್ತಿಗೆ ಪ್ರವೇಶ:
ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್ ನ ಮೂರನೆ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಕರೊಲಿನ್ ಪ್ಲಿಸ್ಕೋವಾ ಚೀನಾದ ಝಾಂಗ್ ಶುಯಿ ಅವರನ್ನು 3-6, 7-5, 6-4 ರಿಂದ ಮಣಿಸುವ ಮೂಲಕ ನಾಲ್ಕನೆ ಸುತ್ತಿಗೆ ತಲುಪಿದ್ದಾರೆ.
2016ರ ರನ್ನರ್-ಅಪ್ ಪ್ಲಿಸ್ಕೋವಾ ಮುಂದಿನ ಸುತ್ತಿನಲ್ಲಿ ಅಮೆರಿಕದ ಜೆನ್ನಿಫರ್ ಬ್ರಾಡಿ ಅವರನ್ನು ಎದುರಿಸಲಿದ್ದಾರೆ. ಬ್ರಾಡಿ ಈವರ್ಷ ಕೇವಲ 7 ಪಂದ್ಯಗಳನ್ನು ಜಯಿಸಿದ್ದರೂ ಗ್ರಾನ್‌ಸ್ಲಾಮ್‌ಗೆ ಅರ್ಹತೆ ಪಡೆದಿದ್ದರು.
ಉಕ್ರೇನ್‌ನ ನಾಲ್ಕನೆ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಅಮೆರಿಕದ ಶೆಲ್ಬಿ ರೋಜರ್ಸ್‌ರನ್ನು 6-4, 7-5 ಸೆಟ್‌ಗಳಿಂದ ಮಣಿಸುವುದರೊಂದಿಗೆ ಅಂತಿಮ-16ರ ಸುತ್ತಿಗೆ ಪ್ರವೇಶಿಸಿದ್ದಾರೆ.
ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊರನ್ನು 6-3, 6-2 ನೇರ ಸೆಟ್‌ಗಳಿಂದ ಸದೆಬಡಿದಿರುವ ರಶ್ಯದ ಡರಿಯಾ ಕಸಟ್‌ಕಿನಾ ಇದೇ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀ ರಶ್ಯದ ಎಲೆನಾ ವೆಸ್ನಿನಾರನ್ನು 2-6, 6-4, 6-1 ಸೆಟ್‌ಗಳಿಂದ ಮಣಿಸಿ ನಾಲ್ಕನೆ ಸುತ್ತಿಗೆ ತಲುಪಿದರು. 15ನೆ ಶ್ರೇಯಾಂಕದ ಮ್ಯಾಡಿಸನ್ ಕಳಪೆ ಆರಂಭದಿಂದ ಬೇಗನೆ ಚೇತರಿಸಿಕೊಂಡು 17ನೆ ಶ್ರೇಯಾಂಕದ ವೆಸ್ನಿನಾರನ್ನು ಮಣಿಸಿದರು. ಮುಂದಿನ ಸುತ್ತಿನಲ್ಲಿ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ.
ಅಮೆರಿಕದ ಐವರು ಆಟಗಾರ್ತಿಯರಾದ ಮ್ಯಾಡಿಸನ್, ವೀನಸ್ ವಿಲಿಯಮ್ಸ್, ಸ್ಲೊಯೆನ್ ಸ್ಟಿಫನ್ಸ್,ಜೆನ್ನಿಪೆರ್ ಬ್ರಾಡಿ ಹಾಗೂ ಕೊಕೊ ವ್ಯಾಂಡಿವಿಘ್ ಅಂತಿಮ-16ರ ಸುತ್ತಿಗೆ ತಲುಪಿದ್ದಾರೆ.







