ರೊಹಿಂಗ್ಯಗಳ ಹತ್ಯಾಕಾಂಡ ತಡೆಯಲು ಸೂಕಿಗೆ ಬ್ರಿಟನ್ ಆಗ್ರಹ

ಲಂಡನ್,ಆ.21: ರೊಹಿಂಗ್ಯ ಮುಸ್ಲಿಮರ ವಿರುದ್ಧ ಸೇನೆ ಹಾಗೂ ಬೌದ್ಧ ತೀವ್ರವಾದಿಗಳು ನಡೆಸುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಸಮುದಾಯವು ಮ್ಯಾನ್ಮಾರ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿರುವಂತೆಯೇ, ಬ್ರಿಟನ್ ರವಿವಾರ ಹೇಳಿಕೆಯೊಂದನ್ನು ನೀಡಿ ರೊಹಿಂಗ್ಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯು, ಮ್ಯಾನ್ಮಾರ್‌ನ ಪ್ರತಿಷ್ಠಿಗೆ ಕಳಂಕತರುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದೆ. ರೋಹಿಂಗ್ಯಗಳ ಅವ್ಯಾಹತ ಹತ್ಯಾಕಾಂಡವನ್ನು ನಿಲ್ಲಿಸಲು ಮಧ್ಯಪ್ರವೇಶಿಸುವಂತೆ ಅದು ಮ್ಯಾನ್ಮಾರ್‌ನ ನಾಯಕಿ ಅಂಗ್‌ಸಾನ್ ಸೂಕಿ ಅವರನ್ನು ಆಗ್ರಹಿಸಿದೆ.
‘‘ ನಮ್ಮ ತಲೆಮಾರಿನ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿಗಳಲ್ಲಿ ಆಂಗ್ ಸಾನ್ ಸೂ ಕಿ ಕೂಡಾ ಒಬ್ಬರೆಂದು ಪರಿಗಣಿಸಲಾಗಿದೆ. ಆದರೆ ರೊಹಿಂಗ್ಯ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಮ್ಯಾನ್ಮಾರ್‌ಗೆ ಕಳಂಕ ತಂದಿದೆ’’ ಎಂದು ಬ್ರಿಟಿಶ್ ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್‌ಸನ್ ಹೇಳಿದ್ದಾರೆ.
ತನ್ನ ದೇಶವನ್ನು ಆಧುನೀಕರಿಸುವಲ್ಲಿ ಸೂಕಿ ಅಗಾಧವಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದೀಗ ಆಕೆ ತನ್ನ ದೇಶವನ್ನು ಒಗ್ಗೂಡಿಸಲು, ಹಿಂಸಾಚಾರವನ್ನು ನಿಲ್ಲಿಸಲು ಹಾಗೂ ರಾಖ್ನೆಯಲ್ಲಿ ರೋಹಿಂಗ್ಯ ಮುಸ್ಲಿಮರು ಮತ್ತಿತರ ಸಮುದಾಯಗಳನ್ನು ಬಾಧಿಸುವಂತಹ ದಬ್ಬಾಳಿಕೆಯನ್ನು ಕೊನೆಗೊಳಿಸಲು ಆಕೆ ತನ್ನ ಅದ್ಭುತವಾದ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಜಾನ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮ್ಯಾನ್ಮಾರ್‌ನ ಕಡುಬಡತನದ ಪ್ರಾಂತ್ಯವಾದ ರಾಖ್ನೆಯಲ್ಲಿ 10 ಲಕ್ಷಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಮರು ವಾಸವಾಗಿದ್ದಾರೆ. ಬೌದ್ಧರು ಬಹುಸಂಖ್ಯಾತರಾಗಿರುವ ಮ್ಯಾನ್ಮಾರ್‌ನಲ್ಲಿ ಅವರು ಹಲವಾರು ದಶಕಗಳಿಂದ ಸೇನೆಯ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ರೊಹಿಂಗ್ಯ ಮುಸ್ಲಿಮರಿಗೆ ಮ್ಯಾನ್ಮಾರ್ ಸರಕಾರವು ಪೌರರ ಸ್ಥಾನಮಾನವನ್ನು ಕೂಡಾ ನೀಡಿಲ್ಲ
ಕಳೆದ ಒಂದು ವಾರದಿಂದ ರಾಖ್ನೆ ಪ್ರಾಂತ್ಯದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಸೈನಿಕರು ಹಾಗೂ ಸ್ಥಳೀಯ ಸಶಸ್ತ್ರಧಾರಿ ನಿವಾಸಿಗಳು ಮಹಿಳೆಯರು, ಮಕ್ಕಳು ಸೇರಿದಂತೆ 400ಕ್ಕೂ ಅಧಿಕ ಮಂದಿ ರೋಹಿಂಗ್ಯ ಮುಸ್ಲಿಮರನ್ನು ಹತ್ಯೆಗೈದಿದ್ದಾರೆ.
ಹಿಂಸಾಚಾರಕ್ಕೆ ಬೆದರಿ 58,600ಕ್ಕೂ ಅಧಿಕ ರೊಹಿಂಗ್ಯಗಳು ನೆರೆಯ ರಾಷ್ಟ್ರವಾದ ಬಾಂಗ್ಲಾಗೆ ಪಲಾಯನಗೆದಿದ್ದಾರೆ.







