7 ಲಕ್ಷ ರೂ. ಪರಿಹಾರ ಧನ ತಿರಸ್ಕರಿಸಿದ ಅನಿತಾ ಕುಟುಂಬ
ನೀಟ್ ಸಂಕಟಕ್ಕೆ ಬಲಿಯಾದ ದಲಿತ ವಿದ್ಯಾರ್ಥಿನಿ

ಚೆನ್ನೈ, ಸೆ.4: ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಸೀಟು ಸಿಗದ ಹಿನ್ನೆಲೆಯಲ್ಲಿ ಕಳೆದ ವಾರ ಆತ್ಮಹತ್ಯೆಗೆ ಶರಣಾದ 17ರ ಹರೆಯದ ಅನಿತಾ ಅವರ ಕುಟುಂಬ ತಮಿಳುನಾಡು ಸರಕಾರ ನೀಡಿದ 7 ಲಕ್ಷ ರೂಪಾಯಿ ಪರಿಹಾರ ಧನವನ್ನು ತಿರಸ್ಕರಿಸಿದೆ.
ಅನಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ನೀಟ್ ವಿನಾಯಿತಿ ಮಾಡದೇ ಇರುವುದಕ್ಕೆ. ಸರಕಾರದ ಪರಿಹಾರ ಧನ ಪಡೆಯುವುದಕ್ಕೆ ಅಲ್ಲ ಎಂದು ಅನಿತಾ ಅವರ ಸಹೋದರ ಮಣಿ ರತ್ನಮ್ ತಿಳಿಸಿದ್ದಾರೆ.
ಅರಿಯಲೂರು ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಪ್ರಿಯಾ ರಾಜ್ಯ ಸರಕಾರದ ಪರಿಹಾರ ಧನದ ಚೆಕ್ ನೀಡಲು ಅನಿತಾ ಕುಟಂಬವನ್ನು ಭೇಟಿಯಾದ ಸಂದರ್ಭ ಮಣಿರತ್ನಂ ಈ ಪ್ರತಿಕ್ರಿಯೆ ನೀಡಿದ್ದಾರೆ.
ಅನಿತಾ ಬಡ ದಲಿತ ಕೂಲಿ ಕಾರ್ಮಿಕರ ಮಗಳು. ವೈದ್ಯೆ ಆಗಬೇಕು ಎಂಬುದು ಅವರ ಕನಸಾಗಿತ್ತು. 12ನೇ ತರಗತಿ ಪರೀಕ್ಷೆಯಲ್ಲಿ ಅವರು ಉತ್ತಮ ಅಂಕ ಪಡೆದಿದ್ದರು. ಈ ಅಂಕಗಳು ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯಲು ನೆರವಾಗಬಹುದು ಎಂದು ಅವರು ನಿರೀಕ್ಷಿಸಿದ್ದರು.
ಆದರೆ, 12ನೇ ತರಗತಿ ಅಂಕ ಪರಿಗಣಿಸಿ ಅಲ್ಲ, ನೀಟ್ ಅಂಕ ಆಧರಿಸಿ ವೈದ್ಯಕೀಯ ಸೀಟಿಗೆ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಕಳೆದ ವಾರ ಸುಪ್ರೀಂ ಕೋರ್ಟ್ ತಮಿಳುನಾಡು ಸರಕಾರಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅನಿತಾ ಆತ್ಮಹತ್ಯೆಗೆ ಶರಣಾಗಿದ್ದರು.







