ಬಸ್- ಕಾರು ನಡುವೆ ಅಪಘಾತ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

ಉಡುಪಿ, ಸೆ.4: ನಿಂತಿದ್ದ ಖಾಸಗಿ ಬಸ್‌ಗೆ ಇನೋವಾ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕಾಸರಗೋಡಿನ ಓರ್ವ ಮೃತಪಟ್ಟು ಏಳು ಮಂದಿ ಗಾಯಗೊಂಡ ಘಟನೆ ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಅಪರಾಹ್ನ 2:15ರ ಸುಮಾರಿಗೆ ನಡೆದಿದೆ.
ಮೃತರನ್ನು ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಮಿರ್ಶದ್(20) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಉಪ್ಪಳ ನಿವಾಸಿಗಳಾದ ಇರ್ಷಾದ್(13), ಅಂಜದ್(21), ಹಫೀಝ್(20), ಅಬ್ದುಲ್ ಶಫಿಕ್ (20), ಅಬೂಬಕ್ಕರ್ ಪವಝ್(19), ನೌಷದ್(20), ಚಾಲಕ ಶಫಿಕ್(21) ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿಯಿಂದ ಕಾಪು ಕಡೆ ಹೋಗುತ್ತಿದ್ದ ಖಾಸಗಿ ಬಸ್ ಪ್ರಯಾಣಿಕರನ್ನು ಇಳಿಸಲು ಉದ್ಯಾವರ ರೇಶ್ಮಾ ಬಾರ್ ಎದುರಿನ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಹಿಂದಿನಿಂದ ಅತಿವೇಗದಿಂದ ಬಂದ ಇನೋವಾ ಕಾರು, ಚಾಲಕನ ನಿಯಂತ್ರಣ ತಪ್ಪಿ ಬಸ್‌ಗೆ ಢಿಕ್ಕಿ ಹೊಡೆಯಿತು.
ಇದರ ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿ ಎದುರಿನ ಸೀಟಿನಲ್ಲಿ ಕುಳಿತಿದ್ದ ಮಿರ್ಶದ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಉಳಿದ ಏಳು ಮಂದಿಯಲ್ಲಿ ಓರ್ವ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ ಮಿತ್ರರಾಗಿದ್ದು, ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕಾಸರಗೋಡಿ ನಿಂದ ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಊರಿಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







