ಸೆ.6: ಶಿಕ್ಷಕರ ಬೇಡಿಕೆ ಈಡೇರಿಸಲು ಆಗ್ರಹಿಸಿ ಧರಣಿ

ಮಂಗಳೂರು, ಸೆ.4: ಶಿಕ್ಷಕ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ಸೆ.6ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಎಲ್ಲಾ ವಿಧಾನ ಪರಿಷತ್ ಪಕ್ಷಾತೀತವಾಗಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿರುವುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಸೆ.6ರಂದು ಬೆಳಿಗ್ಗೆಯಿಂದಲೇ ಧರಣಿ ಆರಂಭಿಸಲಾಗುವುದು. ಕಾಂಗ್ರೆಸ್‌ನ ಓರ್ವ ಶಾಸಕ, ಬಿಜೆಪಿ ಮತ್ತು ಜೆಡಿಎಸ್‌ನ ತಲಾ ಆರು ಶಾಸಕರು ಸೇರಿ ಒಟ್ಟು 13 ಮಂದಿ ಮಾತ್ರ ಈ ಪ್ರತಿಭಟನೆ ನಡೆಸುತ್ತೇವೆ. ಸರಕಾರ ಶಿಕ್ಷಕರ ಹಲವು ವರ್ಷಗಳ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ನಾವು ಪ್ರತಿಭಟನೆಗೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಎಲ್ಲಾ ಶಿಕ್ಷಕರು ಸೆ.5ರಂದು ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು. ಬೇಡಿಕೆ ಈಡೇರಿಲ್ಲ ಎಂಬ ಮಾತ್ರಕ್ಕೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಶಿಕ್ಷಕ ದಿನಾಚರಣೆಗೆ ಅಗೌರವ ತೋರಬಾರದು. ಸಮಸ್ತ ಶಿಕ್ಷಕರ ಪರವಾಗಿ ನಾವು ಹೋರಾಟ ನಡೆಸುತ್ತೇವೆ ಎಂದು ಕಾರ್ಣಿಕ್ ಹೇಳಿದರು.
15ಕ್ಕೂ ಅಧಿಕ ಬೇಡಿಕೆಗಳಿದ್ದರೂ ಸರಕಾರ ನಿವೃತ್ತಿಗೊಳ್ಳುತ್ತಿರುವ ಶಿಕ್ಷಕರ ಬೇಡಿಕೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು. ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಲು ಈಗಾಗಲೇ ಅನುಮತಿ ನೀಡಿದ್ದು, ನಿಗದಿಪಡಿಸಿದ ಮಾನದಂಡಗಳನ್ನು ಆಡಳಿತ ಮಂಡಳಿಗಳು ಪೂರೈಸಲು ತೊಂದರೆಯಾಗುತ್ತಿದೆ. ಇದನ್ನು ಸಡಿಲಗೊಲಿಸಬೇಕು. ಪ್ರಸಕ್ತ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೌಢ ಶಾಲೆಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಅನುಪಾತ 1:70ರಷ್ಟು ಇದ್ದು, ಇದನ್ನು 1:40ಕ್ಕೆ ಕಡಿತಗೊಳಿಸಬೇಕು. ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಯ ವಿದ್ಯಾರ್ಥಿಗಳ ನಡುವಿನ ಮಲತಾಯಿ ಧೋರಣೆಯನ್ನು ನಿಲ್ಲಿಸಬೇಕು. ನೌಕರರ ನಡುವಿನ ತಾರತಮ್ಯವನ್ನು ನಿವಾರಣೆ ಮಾಡಬೇಕು. ಹೀಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.







