ಕಾಸರಗೋಡು: ನಾಪತ್ತೆಯಾಗಿದ್ದ ಮಗುವಿನ ಮೃತದೇಹ ಪತ್ತೆ
.jpg)
ಕಾಸರಗೋಡು, ಸೆ. 4: ಚೆಂಗಳ ಚೇರೂರಿನಲ್ಲಿ ರವಿವಾರ ಸಂಜೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಎರಡೂವರೆ ವರ್ಷದ ಮಗುವಿನ ಮೃತದೇಹ ಇಂದು ಮಧ್ಯಾಹ್ನ ತಳಂಗರೆ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ.
ಆಟವಾಡುತಿದ್ದ ಮಗು ಆಕಸ್ಮಿಕವಾಗಿ ಹೊಳೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಚೆಂಗಳ ಚೇರೂರಿನ ಅಹ್ಮದ್ ಖಬೀರ್ - ರುಖ್ಸಾನ ದಂಪತಿ ಪುತ್ರ ಸೈಬಾನ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.
ರವಿವಾರ ಸಂಜೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ನಂತರ ನಿಗೂಢವಾಗಿ ನಾಪತ್ತೆಯಾಗಿದ್ದು, ಮನೆಯವರು ಪರಿಸರ ಹಾಗೂ ಇತರ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಕೊನೆಗೆ ವಿದ್ಯಾನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮನೆ ಸಮೀಪ ಚಂದ್ರಗಿರಿ ಹೊಳೆ ಹರಿಯುತ್ತಿದ್ದು, ಇದರಿಂದ ಹೊಳೆಗೆ ಬಿದ್ದಿರಬಹುದು ಎಂಬ ಸಂಶಯ ಉಂಟಾದ ಹಿನ್ನೆಲೆಯಲ್ಲಿ ನಾಗರಿಕರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಈ ನಡುವೆ ಘಟನಾ ಸ್ಥಳದಿಂದ ಸುಮಾರು ನಾಲ್ಕು ಕಿ.ಮೀ. ದೂರದ ತಳಂಗರೆ ಹೊಳೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ತಿಂಗಳ ಹಿಂದೆ ಪಾಣತ್ತೂರಿನಲ್ಲಿ ಅಂಗಳದಲ್ಲಿ ಆಟವಾಡುತ್ತಿದ್ದ ಮೂರುವರೆ ವರ್ಷದ ಸನಾ ಫಾತಿಮಾ ಎಂಬ ಬಾಲಕಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿತ್ತು. ಈ ಘಟನೆಯ ನೆನಪು ಮಾಸುವ ಮೊದಲೇ ಇನ್ನೊಂದು ಘಟನೆ ನಡೆದಿದೆ.





