ಹನೂರು : ನೂತನ ಬಸ್ ಸೇವೆಗೆ ಚಾಲನೆ ನೀಡಿದ ಶಾಸಕ ಆರ್.ನರೇಂದ್ರ
.jpg)
ಹನೂರು,ಸೆ.4: ಪಟ್ಟಣದಿಂದ ದೈನಂದಿನ ವ್ಯಾಪಾರ ವಹಿವಾಟು, ಇನ್ನಿತರ ಕೆಲಸ ಕಾರ್ಯಗಳಿಗೆ ಬೆಂಗಳೂರು ಮತ್ತು ಮೈಸೂರಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗಿನ ಜಾವ 2 ನೂತನ ಬಸ್ ಸೇವೆಗಳನ್ನು ಆರಂಭಿಸಲಾಗಿದೆ ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ 2 ನೂತನ ಬಸ್‍ಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ನರೇಂದ್ರ ಹನೂರು ಪಟ್ಟಣದಿಂದ ದೈನಂದಿನ ವ್ಯಾಪಾರ ವಹಿವಾಟು, ಆಸ್ಪತ್ರೆ ಇನ್ನಿತರ ಕೆಲಸ ಕಾರ್ಯಗಳಿಗೆ ಬೆಂಗಳೂರು ಮತ್ತು ಮೈಸೂರಿಗೆ ತೆರಳುತ್ತಿದ್ದರು. ಆದರೆ ಬೆಳಗ್ಗಿನ ಜಾವ ಪಟ್ಟಣದಿಂದ ನೇರ ಬಸ್ ಸೌಕರ್ಯವಿಲ್ಲದ ಹಿನ್ನೆಲೆ ಕೊಳ್ಳೇಗಾಲ ಪಟ್ಟಣಕ್ಕೆ ತೆರಳಿ ಬಳಿಕ ಬೇರೊಂದು ಬಸ್ ಹಿಡಿಯಬೇಕಿತ್ತು. ಇದನ್ನು ಮನಗಂಡು ಹನೂರು ಪಟ್ಟಣದಿಂದಲೇ ಬೆಳಗ್ಗೆ 5:15ಕ್ಕೆ ಬೆಂಗಳೂರು ಮತ್ತು 5:45ಕ್ಕೆ ಮೈಸೂರಿಗೆ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಂಡು ಎಂದು ತಿಳಿಸಿದರು.
ಹನೂರು ಕ್ಷೇತ್ರಕ್ಕೆ 12 ಬಸ್: ಹನೂರು ಕ್ಷೇತ್ರಕ್ಕೆ 12 ಹೊಸ ಬಸ್ಸುಗಳನ್ನು ನೀಡಲಾಗಿದ್ದು ಈಗಾಗಲೇ 3 ಬಸ್ಸುಗಳು ಆಗಮಿಸಿವೆ. ಇನ್ನುಳಿದ 9 ಬಸ್ಸುಗಳನ್ನು ಕೂಡಲೇ ಬಿಡುಗಡೆಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕೊಂಬುಡಿಕ್ಕಿ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಅವರಿಗೆ ಸೂಚನೆ ನೀಡಿದರು. ಕಳೆದ 2 ವರ್ಷಗಳ ಹಿಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಆಗಮಿಸಿದ್ದ ವೇಳೆ 5 ನೂತನ ಮಾರ್ಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು ಅವುಗಳ ನಿಲುಗಡೆಯಾಗಿರುವ ಬಗ್ಗೆ ದೂರುಗಳ ಬಂದಿವೆ ಎಂದು ಡಿಪೋ ಮ್ಯಾನೇಜರ್‍ಗೆ ಶಾಸಕರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕ ಬಾಲಸುಬ್ರಹ್ಮಣ್ಯಂ 5 ಮಾರ್ಗಗಳ ಪೈಕಿ 4 ಮಾರ್ಗಗಳು ಸಂಚರಿಸುತ್ತಿದ್ದು ಹಲಗುಮೂಲೆಯ ಒಂದು ಮಾರ್ಗವನ್ನು ಸರಿಯಾದ ಪ್ರಯಾಣಿಕರಿಲ್ಲದೆ ನಷ್ಟವಾಗುತ್ತಿದ್ದ ಹಿನ್ನೆಲೆ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ರಾಜುಗೌಡ, ಜಯಪ್ರಕಾಶ್‍ಗುಪ್ತ, ಟಿಎಪಿಸಿಎಂಎಸ್ ನಿರ್ದೇಶಕ ಮಾದೇಶ್, ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ಮಹಾದೇವು, ಮಾದೇಶ್, ಸುದೇಶ್ , ಕರಾರಸಾಸಂ ಅಧಿಕಾರಿಗಳು ಉಪಸ್ಥಿತರಿದ್ದರು.







